ವಾಣಿಜ್ಯ

ಕಳೆದ ವರ್ಷ ಎಟಿಎಂ ನಿಂದ ಹಣ ಹಿಂತೆಗೆತಕ್ಕಿಂತಲೂ ಮೊಬೈಲ್ ಪೇಮೆಂಟ್ ಗಳೇ ಹೆಚ್ಚು!

Srinivas Rao BV

ನವದೆಹಲಿ: ದೇಶದಲ್ಲಿ ಮೊಬೈಲ್ ಮೂಲಕ ಹಣ ಪಾವತಿ ಮಾಡುವ ಪದ್ಧತಿ ಹೆಚ್ಚಾಗಿ ಬೆಳೆಯುತ್ತಿರುವುದನ್ನು ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ ವರ್ಷ ಎಟಿಎಂ ನಿಂದ ಹಣ ತೆಗೆದದ್ದಕ್ಕಿಂತಲೂ ಮೊಬೈಲ್ ಮೂಲಕ ಪಾವತಿ ಮಾಡಿರುವ ಸಂಖ್ಯೆಯೇ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 

ವಿಡಿಯೋ ಕಾನ್ಫರೆನ್ಸ್ ಮೂಲಕ ಇನ್ಫಿನಿಟಿ ಫೋರಮ್ ನ್ನು ಉದ್ಘಾಟನೆ ಮಾಡಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.

ಭೌತಿಕ ಶಾಖಾ ಕಚೇರಿಗಳೇ ಅಗತ್ಯವಿಲ್ಲದ ಪೂರ್ಣ ಪ್ರಮಾಣದ ಡಿಜಿಟಲ್ ಬ್ಯಾಂಕ್ ಗಳು ಈಗ ನೈಜವಾಗಿದೆ. ತನ್ನ ಸುತ್ತ ಲಭ್ಯವಿರುವ ತಂತ್ರಜ್ಞಾನ ಅಥವಾ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಭಾರತ ಅದ್ವಿತೀಯವಾದದ್ದು ಎಂದು  ದಶಕಗಳಲ್ಲಿ ನಿರೂಪಿಸಿದೆ ಎಂದು ಮೋದಿ ಈ ಕಾನ್ಫರೆನ್ಸ್ ನ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. 

ಅಂತಾರಾಷ್ಟ್ರೀಯ ಆರ್ಥಿಕ ಸೇವೆ ಕೇಂದ್ರಗಳ ಪ್ರಾಧಿಕಾರ (ಐಎಫ್ ಎಸ್ಸಿಎ) ಆಯೋಜಿಸಿದ್ದ ಕಾರ್ಯಕ್ರಮ ಇದಾಗಿದ್ದು, ಕೇಂದ್ರ ಸರ್ಕಾರ ಜಿಐಎಫ್ ಟಿ ಸಿಟಿ ಹಾಗೂ ಬ್ಲೂಮ್ ಬರ್ಗ್ ಸಹಯೋಗದಲ್ಲಿ ಪ್ರಾಯೋಜಿಸಿದ್ದಾಗಿದೆ. 

ಡಿಜಿಟಲ್ ಇಂಡಿಯಾ ಯೋಜನೆಯ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಆಡಳಿತದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿರುವ ಫಿನ್ ಟೆಕ್ ಸೊಲ್ಯೂಷನ್ ಗಳಿಗೂ ತಮ್ಮ ಸರ್ಕಾರ ಮುಕ್ತ ಆಹ್ವಾನವನ್ನು ನೀಡಿದೆ ಎಂದು ಹೇಳಿದ್ದಾರೆ. 

ಈ ರೀತಿಯ ಫಿನ್ ಟೆಕ್ ಉಪಕ್ರಮಗಳನ್ನು ಫಿನ್ ಟೆಕ್ ಕ್ರಾಂತಿಯನ್ನಾಗಿ ಪರಿವರ್ತಿಸುವುದಕ್ಕೆ ಇದು ಸೂಕ್ತ ಸಮಯ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ 70 ದೇಶಗಳ ಪ್ರತಿನಿಧಿಗಳು, ಹಲವು ಉದ್ಯಮಿಗಳು ಭಾಗವಹಿಸಲಿದ್ದಾರೆ. 

SCROLL FOR NEXT