ವಾಣಿಜ್ಯ

ಇನ್ನು ಭಾನುವಾರ, ರಜಾದಿನವಾದ್ರೂ ನಿಮ್ಮ ಖಾತೆಗೆ ಬರುತ್ತೆ ಸಂಬಳ: ಆರ್‌ಬಿಐ ಹೊಸ ಉಪಕ್ರಮ ಆಗಸ್ಟ್‌ನಿಂದ ಜಾರಿ!

Raghavendra Adiga

ಮುಂಬೈ: ಆಗಸ್ಟ್ 1 ರಿಂದ ಭಾನುವಾರ ಮತ್ತು ಬ್ಯಾಂಕ್ ರಜಾದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (ಎನ್.ಎ.ಸಿ.ಎಚ್.)ವ್ಯವಸ್ಥೆ ಲಭ್ಯವಿರುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೇಂದ್ರ ಬ್ಯಾಂಕಿನ ಎಂಪಿಸಿ ಪ್ರಕಟಣೆಯ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದಾರೆ.

ಲಾಭಾಂಶ, ಬಡ್ಡಿ, ಸಂಬಳ, ಪಿಂಚಣಿ, ವಿದ್ಯುತ್, ಅನಿಲ, ದೂರವಾಣಿ, ನೀರು, ಸಾಲಗಳ ಆವರ್ತಕ ಕಂತುಗಳು, ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ, ವಿಮಾ ಪ್ರೀಮಿಯಂ ಇತ್ಯಾದಿಗಳನ್ನು ಇನ್ನು ಬ್ಯಾಂಕ್ ರಜಾದಿನಗಳಲ್ಲಿ ಸಹ ನಡೆಯಬಹುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಇದುವರೆಗೆ ಗೆಜೆಟೆಡ್ ರಜಾದಿನಗಳು, ಬ್ಯಾಂಕ್ ರಜಾದಿನಗಳು ಮತ್ತು ಭಾನುವಾರದಂದು ಖಾತೆ ಬಳಕೆದಾರರ ಸ್ವಯಂ-ಡೆಬಿಟ್ ಸೂಚನೆಗಳನ್ನು ಪ್ರಕ್ರಿಯೆಗೊಳಿಸಿರದಿದ್ದ ಕಾರಣ ಇದು ಮಹತ್ವದ ಬೆಳವಣಿಗೆ ಎನಿಸಿದೆ. ಈ ರಜಾದಿನಗಳಲ್ಲಿ ಸಂಬಳ ಖಾತೆಗೆ ಜಮೆ ಆಗುತ್ತಿರಲಿಲ್ಲ.

ಹೊಸ ನಿಯಮದ ಪ್ರಕಾರ, ಲೋ ಬ್ಯಾಲೆನ್ಸ್ ಗಾಗಿ ದಂಡವನ್ನು ತಪ್ಪಿಸಲು ರಜಾದಿನಗಳು ಅಥವಾ ಭಾನುವಾರವಾಗಿದ್ದರೂ ಜನರು ನಿಗದಿತ ದಿನದಂದು ತಮ್ಮ ಖಾತೆಗಳಲ್ಲಿ ಸೂಕ್ತವಾದ ಬ್ಯಾಲೆನ್ಸ್ ಕಾಯ್ದುಕೊಳ್ಲಬೇಕಾಗುವುದು.. ಇಲ್ಲಿಯವರೆಗೆ, ಅಂತಹ ದಿನಗಳಲ್ಲಿ ನಿಮಗೆ ಸೂಕ್ತವಾದ ಬಾಕಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೂ ಮತ್ತು ಮರುದಿನ ನಿಮ್ಮ ಖಾತೆಗೆ ಜಮಾ ಮಾಡಿದರೂ ಸಹ, ನೀವು ಪಾವತಿಸಬೇಕಾದ ಯಾವುದೇ ದಂಡವಿರುತ್ತಿರಲಿಲ್ಲ.

"ಎನ್‌ಪಿಸಿಐ ನಿರ್ವಹಿಸುವ ಬೃಹತ್ ಪಾವತಿ ವ್ಯವಸ್ಥೆಯಾದ ಎನ್.ಎ.ಸಿ.ಎಚ್.ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ನೇರ ಮತ್ತು ಲಾಭದಾಯಕ ಡಿಜಿಟಲ್ ಮೋಡ್ (ಡಿಬಿಟಿ) ಯಾಗಿ ಹೊರಹೊಮ್ಮಿದೆ. ಇದು ಪ್ರಸ್ತುತ ಕೋವಿಡ್ -19 ರ ಸಮಯದಲ್ಲಿ ಸರ್ಕಾರದ ಸಬ್ಸಿಡಿಗಳನ್ನು ವರ್ಗಾವಣೆ ಮಾಡಲು ಸಹಾಯ ಮಾಡಲಿದೆ. ಅದೂ ಸಮಯೋಚಿತ ಮತ್ತು ಪಾರದರ್ಶಕ ರೀತಿಯಲ್ಲಿರಲಿದೆ." ಕೇಂದ್ರ ಬ್ಯಾಂಕ್ ಹೇಳಿದೆ.

ಇಷ್ಟೂ ದಿನ ಬ್ಯಾಂಕುಗಳು ಕಾರ್ಯನಿರ್ವಹಿಸುವ ದಿನಗಳಲ್ಲಿ ಮಾತ್ರ ಈ ವ್ಯವಸ್ಥೆ ಲಭ್ಯವಿತ್ತು."ಗ್ರಾಹಕರ ಅನುಕೂಲಕ್ಕಾಗಿ, ಮತ್ತು ವರ್ಷದ ಎಲ್ಲಾ ದಿನಗಳಲ್ಲಿ ಆರ್‌ಟಿಜಿಎಸ್ ಲಭ್ಯತೆಯ ಲಾಭವನ್ನು ಪಡೆಯಲು, 2021 ರ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ವರ್ಷದುದ್ದಕ್ಕೂ ವಾರದ ಎಲ್ಲಾ ದಿನಗಳಲ್ಲಿ ಎನ್.ಎ.ಸಿ.ಎಚ್. ಲಭ್ಯವಾಗುವಂತೆ ಮಾಡಲಾಗುತ್ತಿದೆ." ಹೇಳಿಕೆ ವಿವರಿಸಿದೆ.ಈ ಹಿಂದೆ, ಸರ್ಕಾರದ ಡಿಜಿಟಲೀಕರಣ ಅಭಿಯಾನದ ಭಾಗವಾಗಿ ಆರ್‌ಬಿಐ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆಗಳಾದ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್ ಅನ್ನು ದಿನದ ಎಲ್ಲಾ ಸಮಯ ಹಾಗೀ ವಾರದ ಏಳು ದಿನಗಳವರೆಗೆ ಲಭ್ಯವಾಗುವಂತೆ ಮಾಡಿತ್ತು.

SCROLL FOR NEXT