ವಾಣಿಜ್ಯ

ಮತ್ತೆ ತೈಲೋತ್ಪನ್ನಗಳ ದರ ಏರಿಕೆ: ದಾಖಲೆ ಮಟ್ಟಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆ!

Srinivasamurthy VN

ನವದೆಹಲಿ: ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ದಾಖಲೆ ಮಟ್ಟಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.

ಹೌದು ಮಂಗಳವಾರ ಮತ್ತೆ ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 27 ಪೈಸೆ ಮತ್ತು ಡೀಸೆಲ್ ದರ 30 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ 100 ರೂ ಗಡಿದಾಟಿದೆ. ಮಹಾರಾಷ್ಟ್ರದ ನಂದೇಡ್, ಮಧ್ಯಪ್ರದೇಶದ ರೇವಾ,  ರಾಜಸ್ತಾನದ ಜೈಸಲ್ಮೇರ್ ನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 100 ರೂ ಗಡಿ ದಾಟಿದೆ. ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 91.80 ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ 82.36ರೂ ಗೆ ಏರಿಕೆಯಾಗಿದೆ.

ಪಂಚರಾಜ್ಯಗಳ ಚುನವಾಣೆಯ ಹೊತ್ತಿನಲ್ಲಿ ಸತತ 18 ದಿನಗಳ ಕಾಲ ತೈಲೋತ್ಪನ್ನಗಳ ದರಗಳು ಯಾವುದೇ ಬದಲಾವಣೆ ಕಂಡಿರಲಿಲ್ಲ. ಆದರೆ ಮೇ 4ರಿಂದೀಚೆಗೆ ಇದು 6ನೇ ಬಾರಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಈ ದರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದು, ರಾಜ್ಯ ಸರ್ಕಾರಗಳ ತೆರಿಗೆ ಪ್ರಮಾಣದ  ಮೇಲೆ ದರಗಳ ಬೆಲೆ ಏರಿಳಿತವಾಗುತ್ತದೆ. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ತೈಲೋತ್ಪನ್ನಗಳ ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಿರುವುದು ಇಲ್ಲಿ ಪೆಟ್ರೋಲ್ ದರ 100 ಗಡಿ ದಾಟಲು ಕಾರಣ ಎನ್ನಲಾಗಿದೆ. 

ದೇಶದಲ್ಲೇ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗರಿಷ್ಠ ಪ್ರಮಾಣದಲ್ಲಿದ್ದು, ಇಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 102.70ರೂ ಮತ್ತು ಪ್ರತೀ ಲೀಟರ್ ಡೀಸೆಲ್ ದರ 95.06 ರೂಗೆ ಏರಿಕೆಯಾಗಿದೆ. ಅಂತೆಯೇ ಇದೇ ರಾಜಸ್ಥಾನದ ಜೈಸಲ್ಮರ್ (100.71 ರೂ,), ಬಿಕಾನೇರ್  (100.70) ನಲ್ಲಿ ಪೆಟ್ರೋಲ್ ದರ 100 ಗಡಿದಾಟಿ ಮಾರಾಟವಾಗುತ್ತಿದೆ. ಉಳಿದಂತೆ ಬಾರ್ಮರ್ ನಲ್ಲಿ 99.82 ರೂಗೆ ಮಾರಾಟವಾಗುತ್ತಿದೆ.

ಮಧ್ಯಪ್ರದೇಶದ ಶಾಹ್ದೋಲ್ (102.06), ರೇವಾ (102.04), ಚಿಂದ್ವಾರಾ (101.67 ರೂ) ಮತ್ತು ಬಾಲಾಘಾಟ್ (101.98 ರೂ) ನಲ್ಲಿ ಪೆಟ್ರೋಲ್ ದರ 100 ರೂ ಗಡಿ ದಾಟಿ ಮಾರಾಟವಾಗುತ್ತಿದೆ. ಅಂತೆಯೇ ಇಂದೋರ್ ನಲ್ಲಿ (99.90 ರೂ) ಮತ್ತು ಭೋಪಾಲ್ (99.83 ರೂ) 100 ಗಡಿಯಲ್ಲಿ ಪೆಟ್ರೋಲ್ ದರವಿದೆ. ದರಗಳು  ಇದೇ ರೀತಿಯಲ್ಲಿ ಏರಿಕೆಯಾಗುತ್ತಿದ್ದರೆ, ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ದರ 100 ರೂ ಗಡಿ ದಾಟಲಿದೆ. ಆಗ ಮಧ್ಯ ಪ್ರದೇಶದ ಭೋಪಾಲ್ ಮೊದಲ ನಗರ ಪೆಟ್ರೋಲ್ ದರ 100 ರೂ ಗಡಿ ಗಾಟಿದ ಮೊದಲ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಲಿದೆ. 

ಈ ವರೆಗೂ ಪೆಟ್ರೋಲ್ ದರದಲ್ಲಿ 21.58ರೂ, ಡೀಸೆಲ್ ದರದಲ್ಲಿ 19.18ರೂ ಏರಿಕೆ
ಇನ್ನು ಕೇಂದ ಸರ್ಕಾರ ಈ ಹಿಂದೆ ಅಂದರೆ ಕಳೆದ ಮಾರ್ಚ್ ನಲ್ಲಿ ಅಬಕಾರಿ ತೆರಿಗೆ ಏರಿಕೆ ಮಾಡಿದಾಗಿನಿಂದಲೂ ಈ ವರೆಗೂ ಪೆಟ್ರೋಲ್ ದರದಲ್ಲಿ 21.58ರೂ, ಡೀಸೆಲ್ ದರದಲ್ಲಿ 19.18ರೂ ಏರಿಕೆಯಾಗಿದೆ. ಅದಾಗ್ಯೂ ಬೆಲೆ ಏರಿಕೆ ನಿಯಂತ್ರಣ ಸಂಬಂಧ ಐಒಸಿ, ಬಿಪಿಸಿಎಲ್ ಮತ್ತು ಹೆಚ್ ಪಿಸಿಎಲ್ ಸಂಸ್ಥೆಗಳು  ಮಾರ್ಚ್ 24ರಿಂದ ಏಪ್ರಿಲ್ 15ರ ಅವಧಿಯಲ್ಲಿ ಪೆಟ್ರೋಲ್ ದರದಲ್ಲಿ 67 ಪೈಸೆ ಮತ್ತು ಡೀಸೆಲ್ ದರದಲ್ಲಿ 74 ಪೈಸೆ ದರ ಕಡಿತ ಮಾಡಿದ್ದವು. 

ಬಳಿಕ ಪಂಚರಾಜ್ಯಗಳ ಚುನವಾಣೆ ನಡೆದ ಸಂದರ್ಭದಲ್ಲಿ 18 ದಿನಗಳ ಕಾಲ ತೈಲೋತ್ಪನ್ನ ಸಂಸ್ಥೆಗಳು ದರ ಏರಿಕೆ ಮಾಡಿರಲಿಲ್ಲ. ಆದರೆ ಚುನವಾಣೆ ಮುಕ್ತಾಯವಾಗಿ ಫಲಿತಾಂಶದ ಹೊರಬಿದ್ದ ಬಳಿಕ ನಿರಂತರವಾಗಿ ದರ ಏರಿಕೆಯಾಗುತ್ತಿದೆ.

SCROLL FOR NEXT