ವಾಣಿಜ್ಯ

ಆರ್ ಬಿಐ ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟ: ಸತತ ಎಂಟನೇ ಬಾರಿ ರೆಪೊ, ರಿವರ್ಸ್ ರೆಪೊ ದರ ಯಥಾಸ್ಥಿತಿ ಮುಂದುವರಿಕೆ

Sumana Upadhyaya

ಮುಂಬೈ: ಕೋವಿಡ್ ಎರಡನೇ ಅಲೆ ತಣ್ಣಗಾದ ನಂತರ ಕಳೆದೊಂದು ತಿಂಗಳಿನಿಂದ ದೇಶದ ಆರ್ಥಿಕತೆ ಪುನಶ್ಚೇತನ ಕಂಡುಬರುತ್ತಿದ್ದರೂ ಕೂಡ ಸತತ ಎಂಟನೇ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು ಬದಲಾಯಿಸದೆ ಶೇಕಡಾ 4ರ ಯಥಾಸ್ಥಿತಿ ಮುಂದುವರಿಸಿದೆ.

ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ವಿತ್ತೀಯ ಸಮಿತಿ(ಎಂಪಿಸಿ) ಕಳೆದ ವರ್ಷ 2020ರಲ್ಲಿ ಕೋವಿಡ್ ನಂತರ ರೆಪೊ ಮತ್ತು ರಿವರ್ಸ್ ರೆಪೊ ದರವನ್ನು ಬದಲಾಯಿಸದೆ ಯಥಾಸ್ಥಿತಿ ಮುಂದುವರಿಸುತ್ತಿರುವುದು ಇದು ಎಂಟನೇ ಬಾರಿ. ಆರ್ ಬಿಐ ಕಳೆದ ಬಾರಿ ವಿತ್ತೀಯ ನೀತಿಯ ಬಡ್ಡಿದರ ಬದಲಾಯಿಸಿದ್ದು ಕಳೆದ ವರ್ಷ 2020ರ ಮೇ 22ರಂದು.

ಕಳೆದ ದ್ವೈಮಾಸಿಕ ಹಣಕಾಸು ನೀತಿಯಂತೆ ಈ ಬಾರಿ ಕೂಡ ರೆಪೊ ದರವನ್ನು ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಇಂದು ಹಣಕಾಸು ವಿತ್ತೀಯ ನೀತಿಯ ಸಭೆಯ ನಂತರ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್ಥಿಕತೆಯ ಸಂಪೂರ್ಣ ಪುನಶ್ಚೇತನಕ್ಕೆ ಮತ್ತು ಹಣದುಬ್ಬರವನ್ನು ನಿಶ್ಚಿತ ಗುರಿಯೊಳಗೆ ಇರಿಸಲು ರೆಪೊ ದರ ಮತ್ತು ರಿವರ್ಸ್ ರೆಪೊ ದರವನ್ನು ವ್ಯತ್ಯಾಸ ಮಾಡದೆ ಯಥಾಸ್ಥಿತಿ ಕಾಪಾಡುವುದು ಅನಿವಾರ್ಯವಾಗಿದೆ. ಇಂಧನ ಬೆಲೆ ಏರಿಕೆ ಮಧ್ಯೆ, ಚಿಲ್ಲರೆ ಹಣದುಬ್ಬರ ಕಳೆದ ಆಗಸ್ಟ್ ತಿಂಗಳಲ್ಲಿ ಶೇಕಡಾ 5.3ರಷ್ಟಿತ್ತು. ಎಂಪಿಸಿಗೆ, ವಾರ್ಷಿಕ ಹಣದುಬ್ಬರವನ್ನು ಮಾರ್ಚ್ 31, 2026 ರವರೆಗೆ ಶೇಕಡಾ 4ರಷ್ಟು ಕಾಯ್ದುಕೊಳ್ಳಲು ಆದೇಶ ನೀಡಲಾಗಿದೆ.

ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.

ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

SCROLL FOR NEXT