ವಾಣಿಜ್ಯ

ಯುಪಿಐ ನಲ್ಲಿ ಹೂಡಿಕೆ, ನಿರ್ದಿಷ್ಟ ಪಾವತಿಗೆ ಸಿಂಗಲ್ ಬ್ಲಾಕ್ ವ್ಯವಸ್ಥೆ: ಆರ್ ಬಿಐ

Srinivas Rao BV

ಮುಂಬೈ: ಅತ್ಯಂತ ಜನಪ್ರಿಯ ಪಾವತಿ ವ್ಯವಸ್ಥೆಯಾಗಿರುವ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ನಲ್ಲಿ ಸಿಂಗಲ್ ಬ್ಲಾಕ್, ಮಲ್ಟಿಪಲ್ ಡೆಬಿಟ್ಸ್ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಆರ್ ಬಿಐ ಘೋಷಿಸಿದೆ.

ಈ ವ್ಯವಸ್ಥೆಯ ಮೂಲಕ ಗ್ರಾಹಕರು ತಮ್ಮ ಖಾತೆಗಳಲ್ಲಿ ನಿರ್ದಿಷ್ಟ ಉದ್ದೇಶಗಳಿಗೆ ಹಣವನ್ನು ಬ್ಲಾಕ್ (ಕಾಯ್ದಿರಿಸಬಹುದು) ಹಾಗೂ ಅಗತ್ಯವಿದ್ದಾಗ ಅದನ್ನು ಪಾವತಿ ಮಾಡಬಹುದಾಗಿದೆ. 

ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಈ ಬಗ್ಗೆ ಮಾತನಾಡಿದ್ದು, ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ನಲ್ಲಿ ಸಿಂಗಲ್ ಬ್ಲಾಕ್, ಮಲ್ಟಿಪಲ್ ಡೆಬಿಟ್ಸ್ ವ್ಯವಸ್ಥೆಯ ಮೂಲಕ ಹೂಡಿಕೆ,  ರೀಟೆಲ್ ಡೈರೆಕ್ಟ್ ವೇದಿಕೆ ಹಾಗೂ ಇ-ಕಾಮರ್ಸ್ ವಹಿವಾಟುಗಳನ್ನು ಸುಲಭಗೊಳಿಸುತ್ತದೆ ಎಂದು ವಿವರಿಸಿದ್ದಾರೆ. 

ಈಗ ಸಿಂಗಲ್ ಬ್ಲಾಕ್ ಹಾಗೂ ಸಿಂಗಲ್ ಡೆಬಿಟ್ ವಹಿವಾಟುಗಳು ಯುಪಿಐ ನಲ್ಲಿ ಲಭ್ಯವಿದೆ. ಪೇ ನಿಯರ್ ಬೈ ವರದಿಯ ಪ್ರಕಾರ ಯುಪಿಐ ವಹಿವಾಟುಗಳು ಶೇ. 650 ರಿಂದ ಶೇ.500 ರಷ್ಟು ಏರಿಕೆ ಕಂಡಿದ್ದು, ಟೈರ್ 2 ಪ್ರದೇಶಗಳಲ್ಲೂ ಯುಪಿಐ ಬಳಕೆ ಏರಿಕೆ ಕಂಡಿದೆ.
 
2022 ರ ಮೂರನೇ ತ್ರೈಮಾಸಿಕದಲ್ಲಿ ಯುಪಿಐ 19.65 ಬಿಲಿಯನ್ ವಹಿವಾಟು ಕಂಡಿತ್ತು, ಇದು 32.5 ಲಕ್ಷ ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇನ್ನು ಇದೇ ವೇಳೆ ಉದ್ಯಮ ಹಾಗೂ ವ್ಯಕ್ತಿಗಳು ಸೇರಿದಂತೆ ಎಲ್ಲಾ ವರ್ಗದವರನ್ನು ಒಳಗೊಳ್ಳುವ ಭಾರತ್ ಬಿಲ್ ಪೇಮೆಂಟ್ ವ್ಯವಸ್ಥೆ (ಬಿಬಿಪಿಎಸ್) ಯನ್ನು ವಿಸ್ತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT