ವಾಣಿಜ್ಯ

ಖರೀದಿ ವಿಳಂಬದಿಂದಾಗಿ ಬಿಎಸ್ಎನ್ಎಲ್ 4ಜಿ ಸೇವೆ ಮುಂದಿನ ವರ್ಷ ಪ್ರಾರಂಭ ಸಾಧ್ಯತೆ

Lingaraj Badiger

ನವದೆಹಲಿ: ಸರಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) ಮುಂದಿನ ವರ್ಷದ ವೇಳೆಗೆ 4ಜಿ ಸೇವೆಗಳನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ದೂರಸಂಪರ್ಕ ಇಲಾಖೆಯ(ಡಿಒಟಿ) ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಟೆಲಿಕಾಂ ಸೇವಾ ಪೂರೈಕೆದಾರರು 4G ಸೇವೆಗಳಿಗೆ ಸ್ವದೇಶಿ ಸಾಧನಗಳನ್ನು ಮಾತ್ರ ಬಳಸುತ್ತಿರುವುದರಿಂದ ಉಪಕರಣಗಳ ಖರೀದಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

"ಬಿಎಸ್ಎನ್ಎಲ್ ಮುಂದಿನ ವರ್ಷದ ವೇಳೆಗೆ ತನ್ನ 4G ಸೇವೆಯನ್ನು ಪ್ರಾರಂಭಿಸಲಿದೆ. ಏಕೆಂದರೆ ಟೆಲ್ಕೊ ಇನ್ನೂ ತನ್ನ ಉಪಕರಣಗಳ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. "ಅಲ್ಲದೆ, BSNL ತನ್ನ ಸೇವೆಯನ್ನು 4Gಗೆ ಅಪ್‌ಗ್ರೇಡ್ ಮಾಡಲು ಸ್ವದೇಶಿ ಉಪಕರಣಗಳನ್ನು ಮಾತ್ರ ಬಳಸುತ್ತಿದೆ, ಇದು ವಿಳಂಬಕ್ಕೆ ಕಾರಣವಾಗಿದೆ" ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಖಾಸಗಿ ಟೆಲಿಕಾಂ ಆಪರೇಟರ್‌ಗಳು 5G ಸೇವೆಯನ್ನು ಪ್ರಾರಂಭಿಸುವ ಅಂಚಿನಲ್ಲಿದ್ದರೆ, BSNL ತನ್ನ ಸೇವೆಗಳನ್ನು 4G ಗೆ ಅಪ್‌ಗ್ರೇಡ್ ಮಾಡಲು ಇನ್ನೂ ಹೆಣಗಾಡುತ್ತಿದೆ. ಆದಾಗ್ಯೂ, ಸ್ಥಗಿತಗೊಂಡಿರುವ ಟೆಲಿಕಾಂ ಕಂಪನಿಯನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಇತ್ತೀಚೆಗೆ ರೂ 1.64 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ.

ಪ್ಯಾಕೇಜ್ ಅನ್ನು ಘೋಷಿಸಿದ ನಂತರ, ದೂರಸಂಪರ್ಕ ಸಚಿವ ಅಶ್ವನಿ ವೈಷ್ಣವ್ ಅವರು BSNL ಗೆ 4G ಮತ್ತು 5G ಸೇವೆಗಳ ಮೂಲಕ ಮೊಬೈಲ್ ಚಂದಾದಾರರ ಸಂಖ್ಯೆಯನ್ನು 200 ಮಿಲಿಯನ್‌ಗೆ ದ್ವಿಗುಣಗೊಳಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದರು. ಅಲ್ಲದೆ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) 5G ತಂತ್ರಜ್ಞಾನ ಸಿದ್ಧವಾದ ನಂತರ 4ಜಿ ಜೊತೆಗೆ 5 ಜಿ ಸೇವೆಯನ್ನು ನೀಡುವುದಾಗಿ ಹೇಳಿದ್ದರು.

SCROLL FOR NEXT