ವಾಣಿಜ್ಯ

ರಾಜ್ಯದಲ್ಲಿ 14,593 ಕೋಟಿ ರೂ. ಜಿಎಸ್​ಟಿ ಸಂಗ್ರಹ; ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಕಲೆಕ್ಷನ್!

Lingaraj Badiger

ಬೆಂಗಳೂರು: ಕಳೆದ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 1.87 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದ್ದು, ಈ ಪೈಕಿ ಕರ್ನಾಟಕದ ಪಾಲು ಸಹ ಗಮನಾರ್ಹವಾಗಿದೆ. ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ಒಟ್ಟು 14,593 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ.

ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಜಿಎಸ್​ಟಿ ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ 33,196 ಕೋಟಿ ರೂ ಜಿಎಸ್​ಟಿ ಸಂಗ್ರಹ ಆಗಿದೆ.

ಜಿಎಸ್ ಟಿ ಸಂಗ್ರಹದಲ್ಲಿ ಈ ಬಾರಿ ಕರ್ನಾಟಕ, ಗುಜರಾತ್(11,721 ಕೋಟಿ ರೂ.) ಮತ್ತು ತಮಿಳುನಾಡು(11,559 ಕೋಟಿ ರೂ. ಜಿಎಸ್ ಟಿ) ಅನ್ನು ಹಿಂದಿಕ್ಕಿದೆ. 

ತೆಲಂಗಾಣ ಒಳಗೊಂಡ ಹಿಂದಿನ ಆಂಧ್ರ ಪ್ರದೇಶ 9949 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹದೊಂದಿಗೆ ಐದನೇ ಸ್ಥಾನದಲ್ಲಿದ್ದು, ತೆಲಂಗಾಣ 5622 ಕೋಟಿ ರೂ. ಮತ್ತು ಆಂಧ್ರಪ್ರದೇಶದಲ್ಲಿ 4329 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ.

ಚುನಾವಣಾ ನೀತಿ ಸಂಹಿತೆ ಘೋಷಣೆಗೂ ಮುನ್ನವೇ ಕರ್ನಾಟಕದ ಈ ಸಾಧನೆಯನ್ನು ಸಿಎಂ ಬೊಮ್ಮಾಯಿ ಶ್ಲಾಘಿಸಿದ್ದರು.

ಆರ್ಥಿಕ ಚಟುವಟಿಕೆಗಳು ಮತ್ತು ದೇಶಿ ಬಳಕೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಸರಕು ಮತ್ತು ಸೇವೆಯ ಆಮದು ಹಾಗೂ ಅನುಸರಣೆ ದರ ಕೂಡ ತೀವ್ರವಾಗಿ ಸುಧಾರಿಸಿದೆ. ಇ-ವೇ ಬಿಲ್‌ಗಳು ಮತ್ತು ಇ-ಇನ್‌ವಾಯ್ಸ್‌ಗಳು ರಾಜ್ಯದಲ್ಲಿ ಹೆಚ್ಚಿನ ಜಿಎಸ್ ಟಿ ಸಂಗ್ರಹಿಸಲು ಸಹಾಯ ಮಾಡಿದೆ ಎಂದು ಎಫ್‌ಕೆಸಿಸಿಐ ಜಿಎಸ್‌ಟಿ ಸಮಿತಿ ಅಧ್ಯಕ್ಷ ಬಿಟಿ ಮನೋಹರ್ ಅವರು ಹೇಳಿದ್ದಾರೆ.

SCROLL FOR NEXT