ವಾಣಿಜ್ಯ

ಪ್ರಯಾಣಿಕರಿಗೆ ಅನಾನುಕೂಲ: ಮತ್ತೆ ಏರ್ ಇಂಡಿಯಾಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಡಿಜಿಸಿಎ

Vishwanath S

ನವದೆಹಲಿ: ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಮಾನದಂಡಗಳನ್ನು ಅನುಸರಿಸದ ಏರ್ ಇಂಡಿಯಾಕ್ಕೆ ವಿಮಾನಯಾನ ವಲಯದ ನಿಯಂತ್ರಕ (ಡಿಜಿಸಿಎ) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. 

ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿನ ಏರ್ ಇಂಡಿಯಾ ಘಟಕಗಳನ್ನು ಪರಿಶೀಲಿಸಿದ ನಂತರ, ವಿಮಾನಯಾನ ಸಂಸ್ಥೆಯು ನಾಗರಿಕ ವಿಮಾನಯಾನ ನಿಬಂಧನೆಗಳನ್ನು (ಸಿಎಆರ್) ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಕಂಡುಬಂದಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ನವೆಂಬರ್ 3ರಂದು ನಿಯಂತ್ರಕದಿಂದ ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಿದೆ.

ನೋಟಿಸ್‌ಗೆ ಏರ್ ಇಂಡಿಯಾದಿಂದ ಬಂದ ಪ್ರತಿಕ್ರಿಯೆಯನ್ನು ಆಧರಿಸಿ, ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸುವ ಮಾನದಂಡಗಳಿಗೆ ಸಂಬಂಧಿಸಿದ ಸಿಎಆರ್ ಅನ್ನು ಅದು ಅನುಸರಿಸುತ್ತಿಲ್ಲ ಎಂದು ಕಂಡುಬಂದಿದೆ ಎಂದು ಡಿಜಿಸಿಎ ಹೇಳಿದೆ. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗೆ 10 ಲಕ್ಷ ದಂಡ ವಿಧಿಸಲಾಗಿದೆ.

ತಮ್ಮ ವಿಮಾನಗಳು ವಿಳಂಬವಾದಾಗ ಪ್ರಯಾಣಿಕರಿಗೆ ಹೋಟೆಲ್ ಸೌಕರ್ಯಗಳು, ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಆರಾಮದಾಯಕ ಆಸನಗಳನ್ನು ಪಡೆಯದ ಪ್ರಯಾಣಿಕರಿಗೆ ಪರಿಹಾರ ಮತ್ತು ನೆಲದ ಸಿಬ್ಬಂದಿಯ ಸರಿಯಾದ ತರಬೇತಿಗೆ ಸಂಬಂಧಿಸಿದ ಮಾನದಂಡಗಳಿಗೆ ಏರ್ ಇಂಡಿಯಾ ಗಮನ ನೀಡುತ್ತಿಲ್ಲ ಎಂಬ ಆರೋಪವಿದೆ.

SCROLL FOR NEXT