ನವದೆಹಲಿ: ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಮಸೂದೆ, 2024 ಅನ್ನು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ್ದು, ಬ್ಯಾಂಕ್ ಖಾತೆಗೆ ಹೆಸರಿಸಬಹುದಾದ ನಾಮಿನಿಗಳ ಸಂಖ್ಯೆ ಹೆಚ್ಚಳ ಸೇರಿ ನಿಯಮಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ.
ನಾಮಿನಿಗಳ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಏರಿಸಲು ಪ್ರಸ್ತಾಪಿಸಲಾಗಿದ್ದು, ಒಂದೇ ಬಾರಿ ನಾಲ್ಕು ನಾಮಿನಿಗಳನ್ನು ಒದಗಿಸಬಹುದು. ಈ ಕ್ರಮವು ಠೇವಣಿದಾರರಿಗೆ ಮತ್ತು ಅವರ ಕಾನೂನು ಉತ್ತರಾಧಿಕಾರಿಗಳಿಗೆ ಹೆಚ್ಚಿನ ನಮ್ಯತೆ ಮತ್ತು ಅನುಕೂಲವನ್ನು ನೀಡುವ ಗುರಿ ಹೊಂದಿದೆ. ವಿಶೇಷವಾಗಿ ಠೇವಣಿಗಳು, ಸುರಕ್ಷತಾ ಲಾಕರ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚು ಸಹಾಯಕವಾಗಲಿದೆ. ಮೊದಲ ನಾಮಿನಿ ಹಣವನ್ನು ಕ್ಲೈಮ್ ಮಾಡಲು ಲಭ್ಯವಿಲ್ಲದಿದ್ದರೆ, ಎರಡನೇ ನಾಮಿನಿಯನ್ನು ಕರೆಯಲಾಗುವುದು, ನಂತರ ಮೂರನೆಯವರು ಇತ್ಯಾದಿ.
ಪ್ರಸ್ತುತ ಒಂದು ಬ್ಯಾಂಕ್ ಖಾತೆಗೆ ಒಬ್ಬರು ನಾಮಿನಿಯನ್ನಷ್ಟೇ ಹೆಸರಿಸಲು ಅವಕಾಶ ಇದೆ. ಈ ತಿದ್ದುಪಡಿಯಿಂದ ನಿಮ್ಮ ಬ್ಯಾಂಕ್ ಖಾತೆಗೆ ನೀವು ನಾಲ್ವರು ವಾರಸುದಾರರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಹೆಚ್ಚುವರಿಯಾಗಿ, ಹಕ್ಕು ಪಡೆಯದ ಲಾಭಾಂಶಗಳು, ಷೇರುಗಳು ಮತ್ತು ಬಡ್ಡಿ ಅಥವಾ ಬಾಂಡ್‌ಗಳ ವಿಮೋಚನೆಯನ್ನು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ(IEPF) ವರ್ಗಾಯಿಸಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಹೂಡಿಕೆದಾರರ ಹಿತಾಸಕ್ತಿಗಳ ರಕ್ಷಣೆಯನ್ನು ಖಾತ್ರಿಪಡಿಸುವ ಮೂಲಕ ವ್ಯಕ್ತಿಗಳು ನಿಧಿಯಿಂದ ವರ್ಗಾವಣೆಗಳು ಅಥವಾ ಮರುಪಾವತಿಗಳನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ.
ಇನ್ನು 1968 ರಲ್ಲಿ ನಿಗದಿಪಡಿಸಲಾಗಿದ್ದ ಸಬ್ಸ್ಟಾನ್ಷಿಯಲ್ ಇಂಟರೆಸ್ಟ್ ಅನ್ನು ಐದು ಲಕ್ಷ ರೂಪಾಯಿನಿಂದ ಎರಡು ಕೋಟಿ ರೂಪಾಯಿಗೆ ಏರಿಸಲಾಗಿದೆ.
ಒಂದು ಕಂಪನಿಯಲ್ಲಿ ನಿರ್ದೇಶಕರು 5 ಲಕ್ಷ ರೂಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದರೆ ಅದನ್ನು ಸಬ್ಸ್ಟಾನ್ಷಿಯಲ್ ಇಂಟರೆಸ್ಟ್ ಎಂದು ಪರಿಗಣಿಸಲಾಗುತ್ತದೆ. ಇಂಥವರಿಗೆ ಸಾಲ ಕೊಡಲು ಮಂಡಳಿ ಅನುಮೋದನೆ ಪಡೆಯಬೇಕಿರುವುದು ಸೇರಿದ ಕೆಲ ನಿರ್ಬಂಧಗಳಿವೆ. ಈಗ ತಿದ್ದುಪಡಿ ಮಸೂದೆಯಲ್ಲಿರುವ ಹೊಸ ನಿಯಮದ ಪ್ರಕಾರ, ನಿರ್ದೇಶಕರದ್ದು ಸಬ್ಸ್ಟಾನ್ಷಿಯಲ್ ಇಂಟರೆಸ್ಟ್ ಎಂದು ಪರಿಗಣಿತವಾಗಬೇಕಾದರೆ ಎರಡು ಕೋಟಿ ರೂಪಾಯಿ ಮೊತ್ತದ ಷೇರುದಾರಿಕೆ ಅಥವಾ ಮಾಲಿಕತ್ವ ಇರಬೇಕು.
ಈ ಮಸೂದೆಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ತರಲಾಗಿದ್ದು, ಬ್ಯಾಂಕ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಶಾಸನಬದ್ಧ ವರದಿಗಳನ್ನು ಸಲ್ಲಿಸಲು ವರದಿ ಮಾಡುವ ದಿನಾಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಬ್ಯಾಂಕುಗಳು ನಿಯಮಾವಳಿ ಅನುಸರಿಸಿರುವ ಬಗ್ಗೆ ಪ್ರಸ್ತುತ ಪ್ರತೀ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರಗಳಂದು ವರದಿ ಸಲ್ಲಿಸಬೇಕು. ಆದರೆ ತಿದ್ದುಪಡಿ ಮಾಡಲಾದ ನಿಯಮದ ಪ್ರಕಾರ ತಿಂಗಳ 15ನೇ ತಾರೀಖು ಮತ್ತು ಕೊನೆಯ ತಾರೀಖಿನಂದು ಈ ವರದಿ ಸಲ್ಲಿಕೆ ಮಾಡಬಹುದು.