ಮುಂಬೈ: ಭಾರತೀಯ ಷೇರುಮಾರುಕಟ್ಟೆ ಬುಧವಾರವೂ ಅಲ್ಪ ಪ್ರಮಾಣದ ಚೇತೋಹಾರಿ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆಯ ಉಭಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿವೆ.
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.14 ರಿಂದ ಶೇ.0.042ರಷ್ಟು ಏರಿಕೆ ಕಂಡಿದ್ದು, ಸೆನ್ಸೆಕ್ಸ್ 110.58 ಅಂಕಗಳ ಏರಿಕೆಯೊಂದಿಗೆ 80,956.33 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ 10.30 ಅಂಕಗಳ ಅಲ್ಪ ಏರಿಕೆಯೊಂದಿಗೆ 24,467.45 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಆರ್ ಬಿಐ ಮೇಲೆ ಹೂಡಿಕೆದಾರರ ಕಣ್ಣು
ಇದೇ ವಾರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿತ್ತೀಯ ನೀತಿಗಳ ಪರಿಷ್ಕರಣೆ ಕುರಿತು ಸಭೆ ಸೇರುತ್ತಿದ್ದು, ಹೀಗಾಗಿ ಇದೀಗ ಎಲ್ಲ ಹೂಡಿಕೆದಾರರ ಚಿತ್ತ ಆರ್ ಬಿಐ ಮೇಲೆ ನೆಟ್ಟಿದೆ.
ಹಾಲಿ ಮಾರುಕಟ್ಟೆ ಪರಿಸ್ಥಿತಿಗಳ ಅವಲೋಕನದ ಮೇರೆಗೆ ಆರ್ ಬಿಐ ಪ್ರಸ್ತುತ ಬಡ್ಡಿದರ ಪರಿಷ್ಕರಣೆಗೆ ಮುಂದಾಗುವುದಿಲ್ಲ ಎಂದು ಹೇಳಲಾಗಿದೆ. ಅದಾಗ್ಯೂ ಇತರೆ ನೀತಿಗಳ ಕುರಿತು ಆರ್ ಬಿಐ ಕೈಗೊಳ್ಳಬಹುದಾದ ನಿರ್ಣಯಗಳ ಕುರಿತು ಹೂಡಿಕೆದಾರರು ಗಮನ ಕೇಂದ್ರೀಕರಿಸಿದ್ದಾರೆ.
ಇನ್ನು ಇಂದಿನ ವಹಿವಾಟಿನಲ್ಲಿ ಬ್ಯಾಕಿಂಗ್ ವಲಯದ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಪ್ರಮುಖವಾಗಿ HDFC ಬ್ಯಾಂಕ್, ICICI ಬ್ಯಾಂಕ್ ಸಂಸ್ಥೆಗಳ ಷೇರುಗಳ ಮೌಲ್ಯ ಏರಿಕೆಯಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ HDFC ಬ್ಯಾಂಕ್, ಬಜಾಜ್ ಫಿನ್‌ಸರ್ವ್, NTPC, ಟೈಟಾನ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್ ಮತ್ತು ICICI ಬ್ಯಾಂಕ್ ಸಂಸ್ಥೆಗಳ ಷೇರುಗಳು ಲಾಭಾಂಶ ಗಳಿಸಿದರೆ, ಭಾರ್ತಿ ಏರ್‌ಟೆಲ್, ಟಾಟಾ ಮೋಟಾರ್ಸ್, ಅದಾನಿ ಪೋರ್ಟ್ಸ್, ಪವರ್ ಗ್ರಿಡ್, ಮಾರುತಿ, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.