ಮುಂಬೈ: ಅಮೆರಿಕದ ಕರೆನ್ಸಿ ಬಲವರ್ಧನೆ ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವಿನ ನಡುವೆ ಮಂಗಳವಾರದ ಆರಂಭಿಕ ವಹಿವಾಟಿನಲ್ಲೇ ಭಾರತದ ರೂಪಾಯಿ ಮೌಲ್ಯವು 5 ಪೈಸೆ ಕುಸಿದಿದ್ದು, ಅಮೆರಿಕ ಡಾಲರ್ ಎದುರು 85. 16 ರೂಗೆ ಇಳಿಯುವ ಮೂಲಕ ಸಾರ್ವಕಾಲಿಕ ಕುಸಿತ ದಾಖಲಿಸಿದೆ.
ದೇಶಿಯ ಈಕ್ವಿಟಿ ಮಾರುಕಟ್ಟೆಯಲ್ಲಿ ಧನಾತ್ಮಕ ಅಂಶಗಳು ಸ್ವಲ್ಪ ಚೇತರಿಕೆ ನೀಡಿದ್ದರೂ ಹೆಚ್ಚಿನ ಡಾಲರ್ ಬೇಡಿಕೆ ಮತ್ತು ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯು ಸ್ಥಳೀಯ ಮಾರುಕಟ್ಟೆಯನ್ನು ಮತ್ತಷ್ಟು ಕೆಳಕ್ಕೆ ನೂಕಿದೆ ಎಂದು ವಿದೇಶೀ ವಿನಿಮಯ ವ್ಯಾಪಾರಿಗಳು ಹೇಳುತಿದ್ದಾರೆ.
ಅಮೆರಿಕದ ಕರೆನ್ಸಿಯ ಬಲ ಮತ್ತು ಗಗನಕ್ಕೇರುತ್ತಿರುವ ಬಡ್ಡಿದರ ವಿದೇಶಿ ಹೂಡಿಕೆದಾರರನ್ನು ಭಾರತೀಯ ಷೇರುಗಳನ್ನು ಮಾರಾಟ ಮಾಡುವ ಮೂಲಕ ಲಾಭದ ಕಡೆಗೆ ಪ್ರೇರೆಪಿಸಿದೆ. ಇಂದು ಬೆಳಗ್ಗೆ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ಎದುರು ರೂಪಾಯಿ 85.10 ರೂನೊಂದಿಗೆ ವಹಿವಾಟು ಪ್ರಾರಂಭಿಸಿತ್ತು. ಆದರೆ ವಹಿವಾಟು ಅಂತ್ಯದ ಹೊತ್ತಿಗೆ 5ಪೈಸೆ ಇಳಿಕೆಯಾಗಿ ಸಾರ್ವಕಾಲಿಕ 85.16 ರೂ ಗೆ ಇಳಿಕೆಯಾಗಿದೆ.
ಸೋಮವಾರ ಡಾಲರ್ ಎದುರು ರೂಪಾಯಿ 7 ಪೈಸೆ ಇಳಿಕೆಯಾಗಿ 85.11ಕ್ಕೆ ಅಂತ್ಯಗೊಂಡಿತ್ತು. ಈ ಮಧ್ಯೆ ನಿಫ್ಟಿ 13.70 ಪಾಯಿಂಟ್ ಅಥವಾ 0.06 ರಷ್ಟು ಏರಿಕೆಯಾಗಿ 23,767.15 ಅಂಕಗಳಿಗೆ ತಲುಪಿದೆ.