ಸುಧಾಮೂರ್ತಿ
ಸುಧಾಮೂರ್ತಿ 
ವಾಣಿಜ್ಯ

ಇನ್ಫೋಸಿಸ್‌ ಕಂಪನಿಯಲ್ಲಿ ಸುಧಾಮೂರ್ತಿ ಹೊಂದಿರುವ ಷೇರಿನ ಮೌಲ್ಯವೆಷ್ಟು?

Nagaraja AB

ನವದೆಹಲಿ: ಶುಕ್ರವಾರ ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸಮಾಜ ಸೇವಕರು, ಲೇಖಕಿಯೂ ಆಗಿರುವ ಸುಧಾ ಮೂರ್ತಿ ಅವರು ಐಟಿ ದಿಗ್ಗಜ ಕಂಪನಿ ಇನ್ಫೋಸಿಸ್‌ನಲ್ಲಿ 0.83 ಶೇಕಡಾ ಪಾಲನ್ನು ಹೊಂದಿದ್ದಾರೆ. ಪ್ರಸ್ತುತ ಬೆಲೆಯಲ್ಲಿ ಇದರ ಮೌಲ್ಯ 5,600 ಕೋಟಿ ರೂ. ಆಗಿದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಆಗಿರುವ 73 ವರ್ಷದ ಸುಧಾಮೂರ್ತಿ ಅವರು ಮೂರ್ತಿ ಟ್ರಸ್ಟ್‌ನ ಅಧ್ಯಕ್ಷರಾಗಿದ್ದು, ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಇತ್ತೀಚಿಗೆ ಬಿಎಸ್‌ಇಗೆ ಇನ್ಫೋಸಿಸ್ ಸಲ್ಲಿಸಿದ ಷೇರಿನ ವಿವರ ಪ್ರಕಾರ, ಕಂಪನಿಯ 3.45 ಕೋಟಿ ಷೇರುಗಳನ್ನು ಹೊಂದಿದ್ದಾರೆ. ಪ್ರಸ್ತುತ ಇನ್ಫೋಸಿಸ್ ನಲ್ಲಿ ಸುಧಾ ಮೂರ್ತಿ ಅವರು ಹೊಂದಿರುವ ಒಟ್ಟಿನ ಷೇರಿನ ಮೌಲ್ಯ 5,586.66 ಕೋಟಿ ರೂ. ಆಗಿದೆ. ಅವರ ಪತಿ ನಾರಾಯಣ ಮೂರ್ತಿ ಅವರು 2,691 ಕೋಟಿ ಮೌಲ್ಯದ 1.66 ಕೋಟಿ ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ.

2006 ರಲ್ಲಿ ಪದ್ಮಶ್ರೀ ಮತ್ತು ಈ ವರ್ಷದ ಜನವರಿಯಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಸುಧಾ ಮೂರ್ತಿ ಅವರು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಅತ್ತೆಯೂ ಹೌದು. ಪದ್ಮಶ್ರೀ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದರೆ, ಪದ್ಮಭೂಷಣ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ. ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನೇಮಕಮಾಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದರು.

SCROLL FOR NEXT