ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಾತನಾಡಿ, ಆನ್‌ಲೈನ್ ಗೇಮಿಂಗ್ ಮೇಲಿನ GSTಯಿಂದ ಆದಾಯದಲ್ಲಿ ಶೇಕಡ 412ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.
ಕಳೆದ ಆರು ತಿಂಗಳಲ್ಲಿ ಆನ್‌ಲೈನ್ ಗೇಮಿಂಗ್‌ನಿಂದ ಬಂದ ಆದಾಯವು 6,909 ಕೋಟಿ ರೂಪಾಯಿ ತಲುಪಿದ್ದು ಶೇಕಡ 412ರಷ್ಟು ಹೆಚ್ಚಾಗಿದೆ. ಇದೇ ಅಲ್ಲದೆ ಕ್ಯಾಸಿನೊಗಳ ಆದಾಯವು ಶೇಕಡ 30ರಷ್ಟು ಜಿಗಿದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
2023ರ ಜುಲೈನಲ್ಲಿ ನಡೆದ 50ನೇ GST ಸಭೆಯಲ್ಲಿ ಕೌಶಲ್ಯ ಆಧಾರಿತ ಮತ್ತು ಅವಕಾಶ-ಆಧಾರಿತ ಸೇರಿದಂತೆ ಆನ್‌ಲೈನ್ ಗೇಮಿಂಗ್ ಮೇಲೆ ಶೇಕಡ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆ ಪದ್ಧತಿ 2023ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿತ್ತು. ಇದಕ್ಕೂ ಮೊದಲು, ಕೌಶಲ್ಯ ಆಧಾರಿತ ಆನ್‌ಲೈನ್ ಗೇಮಿಂಗ್ ಮೇಲೆ ಶೇಕಡ 18ರಷ್ಟು ತೆರಿಗೆ ವಿಧಿಸಲಾಗಿತ್ತು.
ಇದೇ ವೇಳೆ, ಕೇದಾರನಾಥ, ಬದರಿನಾಥ್ ನಂತಹ ಧಾರ್ಮಿಕ ಉದ್ದೇಶಗಳಿಗೆ ಹೆಲಿಕಾಪ್ಟರ್ ಸೇವೆಗಳನ್ನು ಬಳಸುವುದಕ್ಕೆ ಈಗ ಶೇ.18ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದ್ದು ಇನ್ನು ಮುಂದೆ ಅದನ್ನು ಶೇ.5ಕ್ಕೆ ಇಳಿಕೆ ಮಾಡಲಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಕೌನ್ಸಿಲ್ ಜೀವ ಮತ್ತು ಆರೋಗ್ಯ ವಿಮಾ ಕಂತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವುದು, ಹಾಗೆಯೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ರೂ 2,000 ವರೆಗಿನ ಸಣ್ಣ ಡಿಜಿಟಲ್ ವಹಿವಾಟುಗಳಿಗೆ ಪಾವತಿ ಅಗ್ರಿಗೇಟರ್‌ಗಳ ಮೇಲೆ ಜಿಎಸ್‌ಟಿ ವಿಧಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಲು ನಿರ್ಧರಿಸಲಾಗಿದೆ.