ನವದೆಹಲಿ: 2025-26ರ ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡಾ 7.8 ರಷ್ಟು ಬೆಳವಣಿಗೆ ದಾಖಲಿಸಿದ್ದು, ಇದು ಅಂದಾಜಿಗಿಂತಲೂ ಹೆಚ್ಚಾಗಿದೆ.
ಮೊದಲ ತ್ರೈಮಾಸಿಕದಲ್ಲಿ(ಏಪ್ರಿಲ್-ಜೂನ್) ನೈಜ GDPಯಲ್ಲಿ ಶೇ. 7.8 ರಷ್ಟು ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿಯ(NSO) ಇತ್ತೀಚಿನ ದತ್ತಾಂಶ ಬಹಿರಂಗಪಡಿಸಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಇದೇ ಅವಧಿಯಲ್ಲಿ ದಾಖಲಾದ ಶೇ. 6.5ರ ಬೆಳವಣಿಗೆಯ ದರಕ್ಕಿಂತ ಗಮನಾರ್ಹ ಬೆಳವಣಿಗೆಯನ್ನು ಸೂಚಿಸುತ್ತದೆ.
ಈ ಬಲವಾದ ಕಾರ್ಯಕ್ಷಮತೆಗೆ ಹೆಚ್ಚಾಗಿ ಉತ್ಸಾಹಭರಿತ ಸೇವಾ ವಲಯ ಕಾರಣವಾಗಿದೆ. ಸೇವಾ ವಲಯ ಶೇ. 9.3 ರಷ್ಟು ನಷ್ಟು ನೈಜ GVA ಬೆಳವಣಿಗೆಯನ್ನು ದಾಖಲಿಸಿದೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ. 6.5ರಷ್ಟು ಇರಬಹುದೆಂಬ ಅಂದಾಜಿಸಲಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದೇಶದ ಆರ್ಥಿಕತೆ ಬೆಳವಣಿಗೆ ಕಂಡಿದೆ. ಈ ಗಣನೀಯ ಬೆಳವಣಿಗೆಗೆ ಸೇವಾ ವಲಯ ಮತ್ತು ಕೃಷಿ ವಲಯಗಳಲ್ಲಿ ದಾಖಲಾಗಿರುವ ಬೆಳವಣಿಗೆ ಪ್ರಮುಖ ಕಾರಣಗಳಾಗಿವೆ.
ಇದಕ್ಕೂ ಮೊದಲು 2024ರ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ. 8.4ರಷ್ಟು ಗರಿಷ್ಠ ಬೆಳವಣಿಗೆ ಕಂಡಿತ್ತು. ಇದೀಗ ಮತ್ತೆ ಶೇ. 7.8ರಷ್ಟು ಬೆಳವಣಿಗೆಯೊಂದಿಗೆ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಇದೇ ಅವಧಿಯಲ್ಲಿ ಚೀನಾದ ಆರ್ಥಿಕ ಬೆಳವಣಿಗೆ ದರವು ಶೇ. 5.2ರಷ್ಟು ಇದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ. 6.8ರಷ್ಟು ಬೆಳವಣಿಗೆ ದಾಖಲಿಸಿದ್ದ ಸೇವಾ ವಲಯವು ಈ ಬಾರಿ ಶೇ. 9.3ರಷ್ಟು ಬೆಳವಣಿಗೆ ದಾಖಲಿಸಿದೆ.