ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ತಡೆಯಲು ಟೆಲಿಕಾಂ ಇಲಾಖೆ(DoT) ಸ್ಮಾರ್ಟ್‌ಫೋನ್ ತಯಾರಕರಿಗೆ ಎಲ್ಲಾ ಹೊಸ ಮೊಬೈಲ್ ಗಳಲ್ಲಿ ಸರ್ಕಾರಿ ಸೈಬರ್-ಭದ್ರತಾ ಅಪ್ಲಿಕೇಶನ್ ಸಂಚಾರ್ ಸಾಥಿ ಆ್ಯಪ್ ಅನ್ನು ಪ್ರಿ ಇನ್‌ಸ್ಟಾಲ್ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದಕ್ಕೆ ಆಪಲ್ ಮತ್ತು ಡಿಜಿಟಲ್ ಗೌಪ್ಯತೆ ಪರವಾಗಿರುವವರಿಂದ ಪ್ರತಿರೋಧ ಎದುರಿಸುವ ಸಾಧ್ಯತೆ ಇದೆ.
ನವೆಂಬರ್ 28 ರಂದು ಹೊರಡಿಸಲಾದ ಈ ಆದೇಶದಲ್ಲಿ, ಸ್ಮಾರ್ಟ್‌ಫೋನ್ ತಯಾರಕರು 90 ದಿನಗಳಲ್ಲಿ ಎಲ್ಲಾ ಹೊಸ ಮಾದರಿಗಳಲ್ಲಿ ಈ ಅಪ್ಲಿಕೇಶನ್ ಅನ್ನು ಪ್ರಿ ಇನ್‌ಸ್ಟಾಲ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ಬಳಕೆದಾರರು ಈ ಅಪ್ಲಿಕೇಶನ್ ಅನ್ನು ತಮ್ಮ ಫೋನ್‌ಗಳಿಂದ ಅನ್‌ಇನ್‌ಸ್ಟಾಲ್ ಮಾಡಲು ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
"ಈ ಸೂಚನೆ ನೀಡಿದ 90 ದಿನಗಳಲ್ಲಿ ಭಾರತದಲ್ಲಿ ಬಳಸಲು ಉದ್ದೇಶಿಸಲಾದ ಮೊಬೈಲ್ ಫೋನ್ ಗಳ ಪ್ರತಿಯೊಬ್ಬ ತಯಾರಕರು ಮತ್ತು ಆಮದುದಾರರು, ಟೆಲಿಕಾಂ ಇಲಾಖೆ ನಿರ್ದಿಷ್ಟಪಡಿಸಿದಂತೆ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ ಅನ್ನು ಭಾರತದಲ್ಲಿ ಬಳಸಲು ತಯಾರಿಸಲಾದ ಅಥವಾ ಆಮದು ಮಾಡಿಕೊಳ್ಳುವ ಎಲ್ಲಾ ಮೊಬೈಲ್ ಫೋನ್ ಗಳಲ್ಲಿ ಪ್ರಿ ಇನ್‌ಸ್ಟಾಲ್ ಆಗಿದೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಈ ಮೂಲಕ ನಿರ್ದೇಶಿಸುತ್ತದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶದ ಅನ್ವಯ, ಸ್ಯಾಮ್‌ಸಂಗ್, ಶಿಯೋಮಿ, ವಿವೋ, ಓಪ್ಪೋ ಸೇರಿದಂತೆ ಆ್ಯಪಲ್‌ನಂತಹ ಎಲ್ಲಾ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕರು, ತಮ್ಮ ಹೊಸ ಮೊಬೈಲ್‌ಗಳಲ್ಲಿ 'ಸಂಚಾರ್ ಸಾಥಿ' ಆ್ಯಪ್ ಅನ್ನು ಅಳವಡಿಸಬೇಕು. ಈ ನಿಯಮವನ್ನು ಜಾರಿಗೆ ತರಲು ಕಂಪನಿಗಳಿಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.
ಅಷ್ಟೇ ಅಲ್ಲ, ಬಳಕೆದಾರರು ಈ ಆ್ಯಪ್ ಅನ್ನು ತಮ್ಮ ಫೋನ್‌ನಿಂದ ತೆಗೆದುಹಾಕಲು ಸಾಧ್ಯವಾಗದಂತೆ ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹಳೆಯ ಫೋನ್‌ಗಳಿಗೂ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಈ ಆ್ಯಪ್ ಅನ್ನು ಕಳುಹಿಸಿಕೊಡುವಂತೆ ಟೆಲಿಕಾಂ ಇಲಾಖೆ ಸೂಚಿಸಿದೆ.
"ಭಾರತದಲ್ಲಿ ಬಳಸಲು ಉದ್ದೇಶಿಸಲಾದ ಮೊಬೈಲ್ ಫೋನ್ ಗಳ ಎಲ್ಲಾ ತಯಾರಕರು ಮತ್ತು ಆಮದುದಾರರು ಈ ನಿರ್ದೇಶನಗಳನ್ನು ನೀಡಿದ 120 ದಿನಗಳ ಒಳಗೆ ಟೆಲಿಕಾಂ ಇಲಾಖೆಗೆ ಅನುಸರಣಾ ವರದಿ ಸಲ್ಲಿಸಬೇಕು" ಎಂದು ನಿರ್ದೇಶಿಸಿದೆ.
ಈ ಆ್ಯಪ್ ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಕಳೆದುಹೋದ ಅಥವಾ ಕದ್ದ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸಲು ಮತ್ತು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಜೊತೆಗೆ, ಬಳಕೆದಾರರ ಹೆಸರಿನಲ್ಲಿರುವ ನಕಲಿ ಮೊಬೈಲ್ ಸಂಪರ್ಕಗಳನ್ನು ಗುರುತಿಸಿ, ಅವುಗಳನ್ನು ಕಡಿತಗೊಳಿಸಲು ಸಹ ಅವಕಾಶ ನೀಡುತ್ತದೆ.
ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಈ ಆ್ಯಪ್, ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ ಮತ್ತು ಸುಮಾರು 37 ಲಕ್ಷ ಕದ್ದ ಫೋನ್‌ಗಳನ್ನು ಬ್ಲಾಕ್ ಮಾಡಿದೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳಿವೆ.