ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಭಾರಿ ಕುಸಿತ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳು ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಮಂಗಳವಾರ ಭಾರತೀಯ ಷೇರುಮಾರುಕಟ್ಟೆ ಅನಿರೀಕ್ಷಿತ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.59ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.0.55ರಷ್ಟು ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 503.62 ಅಂಕಗಳ ಇಳಿಕೆಯೊಂದಿಗೆ 85,138.27 ಅಂಕಗಳಿಗೆ ಇಳಿಕೆಯಾಗಿದ್ದರೆ, ನಿಫ್ಟಿ 143.55 ಅಂಕಗಳ ಇಳಿಕೆಯೊಂದಿಗೆ 26,032.20 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಬ್ಲೂ-ಚಿಪ್ ಬ್ಯಾಂಕ್ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಿನ ಮಾರಾಟ ಮತ್ತು ವಿದೇಶಿ ನಿಧಿಯ ನಿರಂತರ ಹೊರಹರಿವಿನಿಂದಾಗಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಸುಮಾರು 504 ಅಂಕಗಳ ಕುಸಿತ ಕಂಡಿದೆ. ಆ ಮೂಲಕ ಭಾರತೀಯ ಷೇರುಮಾರುಕಟ್ಟೆ ಸತತ ಮೂರನೇ ದಿನವೂ ಇಳಿಕೆಯೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಏಷ್ಯನ್ ಪೇಂಟ್ಸ್, ಮಾರುತಿ, ಭಾರ್ತಿ ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಭಾರತ್ ಎಲೆಕ್ಟ್ರಾನಿಕ್ಸ್ ಮತ್ತು ಲಾರ್ಸೆನ್ & ಟೂಬ್ರೊ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.