ಮುಂಬೈ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಕೇಂದ್ರ ಬಜೆಟ್ 2025ರ ಮಂಡನೆ ಆರಂಭವಾಗುತ್ತಿದ್ದಂತೆಯೇ ಹಾಲಿ ಆಯವ್ಯಯದ ಮೇಲೆ ಹೂಡಿಕೆದಾರರು ಭಾರಿ ನಿರೀಕ್ಷೆ ಇರಿಸಿಕೊಂಡಿದ್ದು, ಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.
ಇಂದು ವಾರದ ರಜಾ ದಿನವಾದರೂ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಷೇರುಮಾರುಕಟ್ಟೆ ಚಾಲ್ತಿಯಲ್ಲಿದ್ದು, ಫ್ಲಾಟ್ ನಲ್ಲಿ ಆರಂಭವಾದ ಮಾರುಕಟ್ಟೆ ಕ್ರಮೇಣ ಏರುಗತಿಯಲ್ಲಿ ವಹಿವಾಟು ನಡೆಸುತ್ತಾ ಸಾಗಿದೆ. ಪ್ರಮುಖವಾಗಿ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಸುಧಾರಣೆಗಳ ಅಂಶಗಳು ಮಾರುಕಟ್ಟೆಯ ಉತ್ತಮ ವಹಿವಾಟಿಗೆ ಕಾರಣವಾಗಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಆಗ್ರೋ ವಲಯದ ಷೇರುಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಶನಿವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ನಡೆಸಿವೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.17ರಷ್ಟು ಏರಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ.1.33ರಷ್ಟು ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಇಂದು ಬರೊಬ್ಬರಿ 901.54ಅಂಕಗಳ ಏರಿಕೆಯೊಂದಿಗೆ 77,661.35 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 308.80 ಅಂಕಗಳ ಏರಿಕೆಯೊಂದಿಗೆ 23,558.30 ಅಂಕಗಳಿಗೆ ಏರಿಕೆಯಾಗಿ ವಹಿವಾಟು ಮುಂದುವರೆಸಿದೆ.
ಇಂದಿನ ವಹಿವಾಟಿನಲ್ಲಿ ಐಟಿ ಮತ್ತು ಎಫ್ ಎಂಸಿಜಿ ವಲಯದ ಷೇರುಗಳ ಹೊರತು ಪಡಿಸಿ ಉಳಿದೆಲ್ಲಾ ವಲಯಗಳ ಷೇರುಗಳು ಗ್ರೀನ್ ನಲ್ಲಿ ವಹಿವಾಟು ನಡೆಸುತ್ತಿವೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಪೈಕಿ ಸನ್ ಫಾರ್ಮಾ, ಭಾರತ್ ಎಲೆಕ್ಟ್ರಾನಿಕ್ಸ್, ಅಲ್ಟ್ರಾಟೆಕ್ ಸಿಮೆಂಟ್, ಅದಾನಿ ಪೋರ್ಟ್ಸ್, ಇಂಡಸ್ಇಂಡ್ ಬ್ಯಾಂಕ್ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದೆ. ಅಂತೆಯೇ ಹೀರೋ ಮೋಟೋಕಾರ್ಪ್, ಒಎನ್‌ಜಿಸಿ, ಡಾ. ರೆಡ್ಡೀಸ್ ಲ್ಯಾಬ್ಸ್, ಟ್ರೆಂಟ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ಸಂಸ್ಥೆಯ ಷೇರುಗಳು ನಷ್ಟ ಕಂಡಿವೆ.