ನವದೆಹಲಿ: ಈ ವರ್ಷ ಜನವರಿಯಲ್ಲಿ ಭಾರತದಿಂದ ಸ್ಮಾರ್ಟ್‌ಫೋನ್ ರಫ್ತು 3 ಬಿಲಿಯನ್ ಡಾಲರ್ (ರೂ. 25,000 ಕೋಟಿ) ದಾಟಿದೆ. ಇದು ಒಂದೇ ತಿಂಗಳಲ್ಲಿ ಇದುವರೆಗಿನ ಅತ್ಯಧಿಕ ರಫ್ತು ಆಗಿದೆ.
ಉದ್ಯಮ ದೃಷ್ಟಿಕೋನದಿಂದ ಹೇಳುವುದಾದರೆ, ಜನವರಿ 2025 ರಲ್ಲಿ ರಫ್ತು ಮಾಡಲಾದ 3.14 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್ ರಫ್ತು, 2020-2021(FY21) ರ ಒಟ್ಟು ಸ್ಮಾರ್ಟ್‌ಫೋನ್ ರಫ್ತಿಗೆ ಸಮನಾಗಿದೆ.
ಜನವರಿ 2024 ರಲ್ಲಿ ಭಾರತವು 1.31 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್‌ಫೋನ್ ರಫ್ತು ಮಾಡಿತ್ತು. ಇದಕ್ಕೆ ಹೋಲಿಸಿದರೆ ಜನವರಿ 2025 ರ ರಫ್ತು ಶೇಕಡಾ 140 ರಷ್ಟು ಹೆಚ್ಚಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ X ನಲ್ಲಿ 2024-2025 ರ ಸ್ಮಾರ್ಟ್‌ಫೋನ್ ರಫ್ತು ರೂ. 2.25 ಟ್ರಿಲಿಯನ್ ತಲುಪುವ ಸಾಧ್ಯತೆಯಿದೆ ಎಂದು ಪೋಸ್ಟ್ ಮಾಡಿದ್ದರು. 2023-2024 (FY24) ರಲ್ಲಿ ಒಟ್ಟು 15.6 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್ ಫೋನ್ ರಫ್ತು ಆಗಿತ್ತು.
ಜನವರಿಯಲ್ಲಿ ಒಟ್ಟು ರಫ್ತಿನಲ್ಲಿ ಸುಮಾರು ಶೇಕಡಾ 70 ರಷ್ಟು ಆಪಲ್‌ನ ಐಫೋನ್ ಸಾಗಣೆಯ ಮೂಲಕ ಬಂದಿದೆ. ಒಟ್ಟು ರಫ್ತಿನಲ್ಲಿ ಫಾಕ್ಸ್‌ಕಾನ್ ಮಾತ್ರ ಶೇಕಡಾ 33 ರಷ್ಟು ರಫ್ತು ಹೊಂದಿದ್ದು, ಇದು 960 ಮಿಲಿಯನ್‌ಗೆ ಸಮನಾಗಿರುತ್ತದೆ.
ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಂಡ ಟಾಟಾ ಎಲೆಕ್ಟ್ರಾನಿಕ್ಸ್ 800 ಮಿಲಿಯನ್‌ಗಿಂತಲೂ ಹೆಚ್ಚಿನ ಮೊತ್ತದ ಸ್ಮಾರ್ಟ್‌ಫೋನ್ ಗಳನ್ನು ರಫ್ತು ಮಾಡಿದೆ. ಪೆಗಾಟ್ರಾನ್ (ಟಾಟಾ ಬಹುಪಾಲು ನಿಯಂತ್ರಣ ಪಾಲನ್ನು ಪಡೆದುಕೊಂಡಿದೆ) 500 ಮಿಲಿಯನ್ ಡಾಲರ್ ದಾಟುವ ಮೂಲಕ ತನ್ನ ಅತ್ಯಧಿಕ ಮಾಸಿಕ ರಫ್ತನ್ನು ದಾಖಲಿಸಿದೆ.
ಜನವರಿಯಲ್ಲಿ, ಎಲ್ಲಾ ಮೂರು ಆಪಲ್ ಮಾರಾಟಗಾರರು ತಮ್ಮ ಹಿಂದಿನ ಒಂದು ತಿಂಗಳ ರಫ್ತಿನ ದಾಖಲೆಗಳನ್ನು ಮುರಿದಿದ್ದಾರೆ.