ಮುಂಬೈ: ಪಾತಾಳಕ್ಕೆ ಕುಸಿದಿದ್ದ ಭಾರತ ಮತ್ತು ಅಮರಿಕ ನಡುವಿನ ಸಂಬಂಧ ಹೊಸ ಒಪ್ಪಂದದ ಮೂಲಕ ಚೇತರಿಕೆ ಕಾಣುವ ಸುಳಿವು ದೊರೆತ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆ ಚೇತಾಹಾರಿ ವಹಿವಾಟು ನಡೆಸುತ್ತಿದೆ.
ಹೌದು.. ಭಾರತ ಮತ್ತು ಅಮೆರಿಕ ನಡುವೆ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದ್ದು, ಇಂದು 2 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯ ಷೇರು ಸೂಚ್ಂಕ ನಿಫ್ಟಿ 26 ಸಾವಿರ ಗಡಿ ದಾಟಿದೆ.
ಬೆಳಗ್ಗೆ ವಹಿವಾಟು ಆರಂಭವಾಗುತ್ತಲೇ ಬೆಳಗ್ಗೆ 10.15ರ ಸುಮಾರಿನಲ್ಲಿ ನಿಫ್ಟಿ 127.95 ಅಂಕ ಏರಿಕೆ ಕಂಡು ದಾಖಲೆ ನಿರ್ಮಿಸಿತು.
127 ಅಂಕಗಳ ಏರಿಕೆಯೊಂದಿಗೆ ನಿಫ್ಟಿ 26, 100 ಗಡಿದಾಟಿತು. ಆ ಮೂಲಕ 2 ವರ್ಷಗಳ ಬಳಿಕ ನಿಫ್ಟಿ 26 ಸಾವಿರ ಅಂಕಗಳ ಗಡಿದಾಟಿತು. ಈ ಹಿಂದೆ ಅಂದರೆ 2024ರ ಸೆಪ್ಟೆಂಬರ್ ನಲ್ಲಿ ನಿಫ್ಟಿ 26,057.20 ಅಂಕಗಳಿಗೆ ಏರಿಕೆಯಾಗಿತ್ತು. ಇದು ಆ ದಾಖಲೆ ಹಿಂದಿಕ್ಕಿ ನೂತನ ಗರಿಷ್ಠ ಮಟ್ಟ ತಲುಪಿದೆ.
ನಿಪ್ಟಿಯ ಕೊನೆಯ 52 ವಾರಗಳ ಗರಿಷ್ಠ ಮಟ್ಟ 26,277.35 ಆಗಿತ್ತು. ಅಂತೆಯೇ ಬಿಎಸ್‌ಇ ಸೆನ್ಸೆಕ್ಸ್ ಕೂಡ 85,154.15 ಅಂಕಗಳಿಗೆ ಏರಿಕೆಯಾಗಿ, 727.81 ಅಂಕಗಳು ಅಥವಾ ಶೇಕಡಾ 0.86 ರಷ್ಟು ಏರಿಕೆಯಾಗಿ, ಸೆಪ್ಟೆಂಬರ್ 27, 2024 ರಂದು ದಾಖಲಾದ 85,478.25 ರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹತ್ತಿರವಾಯಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸನ್ನಿಹಿತ ಸಭೆಯ ವರದಿಗಳು ಮತ್ತು ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ನಿರೀಕ್ಷೆಗಳು ಈ ಚೇತೋಹಾರಿ ವಹಿವಾಟಿಗೆ ಕಾರಣವೆಂದು ತಜ್ಞರು ಹೇಳಿದ್ದಾರೆ.