ಮುಂಬೈ; ಅಮೆರಿಕ ಮೂಲದ ಶಾರ್ಟ್-ಸೆಲ್ಲಿಂಗ್ ಕಂಪನಿ ಹಿಂಡೆನ್‌ಬರ್ಗ್ (Hindenburg) ಆರೋಪಗಳಿಗೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಗೌತಮ್ ಅದಾನಿ (Goutam Adani) ಸಂಸ್ಥೆಗಳಿಗೆ ಸೆಬಿ (SEBI) ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಅದಾನಿ ಸಮೂಹ ಸಂಸ್ಛೆಗಳ ಮೌಲ್ಯ ಒಂದೇ ದಿನದಲ್ಲಿ ಬರೊಬ್ಬರಿ 69 ಸಾವಿರ ಕೋಟಿ ಏರಿಕೆ ಕಂಡಿದೆ ಎಂದು ಹೇಳಲಾಗಿದೆ.
ಹೌದು.. ಹಿಂಡನ್ ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್‌ಗೆ ಸೆಬಿ ಕ್ಲೀನ್ ಚಿಟ್ ನೀಡಿದ್ದು, 'ಹಿಂಡೆನ್‌ಬರ್ಗ್‌ನ ಆರೋಪಗಳಲ್ಲಿ ಅರ್ಹತೆ ಇಲ್ಲ, ಪುರಾವೆಗಳ ಕೊರತೆ ಇದೆ ಎಂದು ಹೇಳಿದೆ. ಗೌತಮ್ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಹಿಂಡೆನ್‌ಬರ್ಗ್ ಹೊರಿಸಲಾದ ಎಲ್ಲಾ ಆರೋಪಗಳು ಆಧಾರರಹಿತವೆಂದು ಮಾರುಕಟ್ಟೆ ನಿಯಂತ್ರಕ ಸೆಬಿ ಕಂಡುಕೊಂಡಿದೆ.
ಈ ಹಿಂದೆ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಷೇರುಗಳನ್ನು ಬದಲಾಯಿಸಿದೆ ಎಂದು ಆರೋಪಿಸಿತ್ತು. ಆದರೆ ಸೆಬಿ ಕಂಪನಿಯ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ.
ಒಂದೇ ದಿನದಲ್ಲಿ Adani Group ಮೌಲ್ಯ 69 ಸಾವಿರ ಕೋಟಿ ಏರಿಕೆ!
ಅತ್ತ ಸೆಬಿ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಇಂದಿನ ಅಂದರೆ ಶುಕ್ರವಾರದ ಒಂದೇ ದಿನದ ವಹಿವಾಟಿನಲ್ಲಿ ಅದಾನಿ ಗ್ರೂಪ್ ಕಂಪನಿಗಳು ಮಾರುಕಟ್ಟೆ ಬಂಡವಾಳೀಕರಣದಲ್ಲಿ 69,000 ಕೋಟಿ ರೂ.ಗಳಿಗಿಂತ ಹೆಚ್ಚು ಗಳಿಕೆ ಕಂಡಿದೆ. ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಸೆಬಿ ಕ್ಲೀನ್ ಚಿಟ್ ನೀಡಿದ ನಂತರ ಖರೀದಿ ಭರಾಟೆ ಇದಕ್ಕೆ ಕಾರಣವಾಯಿತು ಎನ್ನಲಾಗಿದೆ.
ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಅದಾನಿ ಪವರ್ ಶೇ. 12.40 ರಷ್ಟು ಏರಿಕೆಯಾಗಿದ್ದು, ಗುಂಪಿನ ಪಟ್ಟಿ ಮಾಡಲಾದ ಘಟಕಗಳಲ್ಲಿ ಅತಿ ಹೆಚ್ಚು ಲಾಭಾಂಶ ಗಳಿಸಿದ ಷೇರಾಗಿದೆ.
ಷೇರು ವಿನಿಮಯ ದತ್ತಾಂಶದ ಪ್ರಕಾರ, ಅದಾನಿ ಟೋಟಲ್ ಗ್ಯಾಸ್ ಶೇ. 7.35 ರಷ್ಟು ಏರಿಕೆಯಾದರೆ, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಎಂಟರ್‌ಪ್ರೈಸಸ್ ಶೇ. 5.33 ಮತ್ತು 5.04 ರಷ್ಟು ಏರಿಕೆಯಾಗಿದೆ. ಅಂತೆಯೇ ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇ. 4.70 ರಷ್ಟು ಏರಿಕೆಯಾಗಿ, ಶೇ. 4.5 ಕ್ಕಿಂತ ಹೆಚ್ಚಿನ ಲಾಭ ಗಳಿಸಿದ ಕಂಪನಿಗಳ ಪಟ್ಟಿಯನ್ನು ಪೂರ್ಣಗೊಳಿಸಿದೆ.
ಹೂಡಿಕೆದಾರರಲ್ಲಿ ಮರಳಿದ ವಿಶ್ವಾಸ
ಇನ್ನು ಸೆಬಿ ಕ್ಲೀನ್ ಚಿಟ್ ನೀಡಿರುವುದು ಚಿಲ್ಲರೆ ಹೂಡಿಕೆದಾರರಲ್ಲಿ ಮಾತ್ರವಲ್ಲದೆ ಜಾಗತಿಕ ಸಾಂಸ್ಥಿಕ ಪಾಲುದಾರರಲ್ಲಿಯೂ ಅದಾನಿ ಸಮೂಹದ ಮೇಲೆ ವಿಶ್ವಾಸ ಮರಳುವಂತಾಗಿದೆ. ಹಿಂಡೆನ್‌ಬರ್ಗ್-ವರದಿ ಬೆನ್ನಲ್ಲೇ ಅದಾನಿ ಸಮೂಹದ ಷೇರುಗಳ ಮೌಲ್ಯ ತೀವ್ರವಾಗಿ ಕುಸಿದಿತ್ತು.
ಹಿಂಡನ್‌ಬರ್ಗ್ ಆರೋಪದಿಂದ ದೇಶೀಯ ಮತ್ತು ವಿದೇಶಿ ಹೂಡಿಕೆದಾರರು ಅದಾನಿ ಕಂಪನಿಗಳ ಷೇರು ಖರೀದಿಸಲು ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಸೆಬಿಯಿಂದ ಕ್ಲೀನ್‌ಚಿಟ್ ಸಿಕ್ಕಿದ ಬೆನ್ನಲ್ಲೇ ಹೂಡಿಕೆದಾರರು ಹೂಡಿಕೆ ಮಾಡಲು ಆರಂಭಿಸಿದ್ದರಿಂದ ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಕಾಣಲು ಆರಂಭಿಸಿದೆ.
ಅದಾನಿ ಪವರ್ ದಿನವಿಡೀ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಸಂಘಿ ಇಂಡಸ್ಟ್ರೀಸ್ ಷೇರುಗಳು ಶೇಕಡಾ 1.41 ರಷ್ಟು ಏರಿಕೆ ಕಂಡವು, ಎಸಿಸಿ ಶೇಕಡಾ 1.21 ರಷ್ಟು ಏರಿಕೆಯಾಯಿತು, ಅದಾನಿ ಪೋರ್ಟ್ಸ್ ಶೇಕಡಾ 1.09 ರಷ್ಟು ಏರಿಕೆಯಾಯಿತು ಮತ್ತು ಅಂಬುಜಾ ಸಿಮೆಂಟ್ಸ್ ಶೇಕಡಾ 0.28 ರಷ್ಟು ಏರಿಕೆಯಾಯಿತು. ಈ ಎಲ್ಲಾ ಸಂಸ್ಥೆಗಳ ಒಟ್ಟು ಮಾರುಕಟ್ಟೆ ಮೌಲ್ಯಮಾಪನವು ರೂ 13.96 ಲಕ್ಷ ಕೋಟಿಗಳಷ್ಟಿತ್ತು.
"ಹಿಂಡೆನ್‌ಬರ್ಗ್ ತನಿಖೆಯಲ್ಲಿ ಸೆಬಿ ಗುಂಪನ್ನು ತೆರವುಗೊಳಿಸಿದ ನಂತರ ಅದಾನಿ ಗುಂಪಿನ ಷೇರುಗಳು ಏರಿಕೆಯಾಗಿ, ಹೊಸ ಹೂಡಿಕೆದಾರರ ವಿಶ್ವಾಸ ಮತ್ತು ಸಮೂಹದಾದ್ಯಂತ ಬಲವಾದ ಖರೀದಿ ಆಸಕ್ತಿಯನ್ನು ಹುಟ್ಟುಹಾಕಿತು" ಎಂದು ಬಜಾಜ್ ಬ್ರೋಕಿಂಗ್ ರಿಸರ್ಚ್ ತಿಳಿಸಿದೆ.