ನವದೆಹಲಿ: ವಿಮಾನಯಾನ ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರನ್ನು ವಂಚಿಸುವ ರೀತಿಯಲ್ಲಿ 'ಡಾರ್ಕ್ ಪ್ಯಾಟರ್ನ್ ' ಪ್ರದರ್ಶಿಸಿದ್ದ ವಿಮಾನಯಾನ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರೂ. ದಂಡ ವಿಧಿಸುವ ಮೂಲಕ ಎಚ್ಚರಿಸಿದೆ.
ವಿಮಾನಯಾನ ಸಂಸ್ಥೆ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಬುಕಿಂಗ್ ಮಾಡುವಾಗ ಆನ್ ಲೈನ್ ಪ್ಲಾಟ್ ಫಾರ್ಮ್ ಅಲ್ಲಿ ಡಾರ್ಕ್ ಪ್ಯಾಟರ್ನ್ ಪ್ರದರ್ಶಿಸಿತ್ತು. ಇದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ಬರುತ್ತಲೇ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಸಚಿವರ ಸೂಚನೆಯಂತೆ ಕಾರ್ಯಪ್ರವೃತ್ತರಾದ CCPA ತಂಡ ಸ್ಪೈಸ್ ಜೆಟ್ ಏರ್ ಲೈನ್ಸ್ ಸಂಸ್ಥೆ ತನ್ನ ಪ್ಲಾಟ್ ಫಾರ್ಮ್ ಅಲ್ಲಿ ಗ್ರಾಹಕರನ್ನು ಮೋಸಗೊಳಿಸುವ 'ಡಾರ್ಕ್ ಪ್ಯಾಟರ್ನ್' ಕುಶಲತೆ ಪ್ರದರ್ಶಿಸಿರುವುದು ಕಂಡುಬಂದಿದ್ದು, ಸಂಸ್ಥೆಗೆ 1 ಲಕ್ಷ ರೂ. ದಂಡ ವಿಧಿಸಿದ್ದಲ್ಲದೇ, ಡೀಫಾಲ್ಟ್-ಸಮ್ಮತಿ ಅಭ್ಯಾಸಗಳನ್ನು ಶಾಶ್ವತವಾಗಿ ನಿಲ್ಲಿಸುವಂತೆ ಸೂಚಿಸಿದೆ.
ಆನ್ ಲೈನ್ ವೇದಿಕೆಯಲ್ಲಿ ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರ ಒಪ್ಪಿಗೆಯನ್ನು ಯಾವಾಗಲೂ ಸ್ಪಷ್ಟವಾಗಿ ಮತ್ತು ಮಾಹಿತಿಯುಕ್ತ ಮತ್ತು ಮುಕ್ತವಾಗಿ ನೀಡಬೇಕು ಎಂದು CCPA ನಿರ್ದೇಶನ ನೀಡಿದೆ.
ಸ್ಪೈಸ್‌ಜೆಟ್ (SpiceJet) ಸಂಸ್ಥೆ ಸ್ವಯಂ ಚಾಲಿತ ನೋಂದಣಿ ಪ್ರಚಾರದ ಸಂದೇಶ, ಮಾಹಿತಿಗಾಗಿ ಮೊದಲೇ ಆಯ್ಕೆ ಮಾಡಲಾದ ಸಮ್ಮತಿ, ಗ್ರಾಹಕರ ಮೇಲೆ ಪ್ರಭಾವ ಬೀರುವಂತಹ ದಾರಿ ತಪ್ಪಿಸುವ ಇಂಟರ್‌ಫೇಸ್ ವಿನ್ಯಾಸಗೊಳಿಸಿತ್ತು. ಪೂರ್ವನಿಯೋಜಿತ ಸಮ್ಮತಿ (default-consent) ಪದ್ಧತಿ ಅಳವಡಿಸಿತ್ತು.
ನಿಮ್ಮ ಸ್ಪೈಸ್ ಜೆಟ್ ವಿಮಾನ ಬುಕ್ ಮಾಡಿ, ವಿಶೇಷ ಪ್ರಯೋಜನಗಳಿಗಾಗಿ ಸ್ಪೈಸ್ ಕ್ಲಬ್‌ಗೆ ಸೇರಿ ಎಂಬುದು ಸ್ವಯಂ ಚಾಲಿತವಾಗಿತ್ತು.
"ಸ್ಪೈಸ್ ಕ್ಲಬ್ ಪ್ರಚಾರದ ಕೊಡುಗೆ, ಡೀಲ್ ಮತ್ತು ಅಪ್‌ಡೇಟ್‌ಗಳನ್ನು ಸ್ವೀಕರಿಸಲು ನಾನು ಒಪ್ಪುತ್ತೇನೆ" (ಮೊದಲೇ ಆಯ್ಕೆ ಮಾಡಲಾಗಿರುತ್ತದೆ.) "ಸೀಮಿತ ಅವಧಿಯ ಕೊಡುಗೆ! ದರ ಏರಿಕೆಯನ್ನು ತಪ್ಪಿಸಲು ಮತ್ತು ಉತ್ತಮ ಡೀಲ್ ಪಡೆಯಲು ಈಗಲೇ ಬುಕ್ ಮಾಡಿ! " ಎಂದೆಲ್ಲಾ ಗ್ರಾಹಕರನ್ನು ದಾರಿ ತಪ್ಪಿಸುವ ಇಂಟರ್‌ಫೇಸ್ ವಿನ್ಯಾಸವನ್ನು ಸ್ಪೈಸ್‌ಜೆಟ್ ವಿಮಾನ ಸಂಸ್ಥೆ ಪ್ರದರ್ಶಿಸಿರುವುದು CCPA ಗಮನಕ್ಕೆ ಬಂದಿದೆ.