ನವದೆಹಲಿ: ಭಾರತದ ಚುನಾವಣಾ ರಾಜಕೀಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗ್ಯಾರಂಟಿ ಅಥವಾ ಉಚಿತ ಕೊಡುಗೆಗಳ ಘೋಷಣೆ ಒಂದು ಹೊಸ ಸಂಸ್ಕೃತಿಯಾಗಿ ಮಾರ್ಪಟ್ಟಿದೆ. ಮತದಾರರನ್ನು ಸೆಳೆಯುವ ಉದ್ದೇಶದಿಂದ ರಾಜಕೀಯ ಪಕ್ಷಗಳು ನೀಡುವ ಉಚಿತ ವಿದ್ಯುತ್, ಮಹಿಳೆಯರಿಗೆ ನಗದು ನೆರವು, ಉಚಿತ ಬಸ್ ಪ್ರಯಾಣದಂತಹ ಯೋಜನೆಗಳು ತಾತ್ಕಾಲಿಕವಾಗಿ ಜನಸಾಮಾನ್ಯರಿಗೆ ಆರ್ಥಿಕ ಆಸರೆಯಾದಂತೆ ಕಂಡರೂ, ರಾಜ್ಯಗಳ ಬೊಕ್ಕಸಕ್ಕೆ ದೊಡ್ಡ ಮಟ್ಟದ ಹೊರೆಯಾಗಿ ಪರಿಣಮಿಸುತ್ತಿವೆ. ಹೌದು, ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳದೆ, ಸಾವಿರಾರು ಕೋಟಿ ರೂಪಾಯಿಗಳನ್ನು ಇಂತಹ ಯೋಜನೆಗಳಿಗೆ ಮೀಸಲಿಡುತ್ತಿರುವುದರಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೀವ್ರ ಆದಾಯ ಕೊರತೆ ಮತ್ತು ಸಾಲದ ಸುಳಿಗೆ ಸಿಲುಕುತ್ತಿವೆ ಎಂದು 2026-27ರ ಪಿಆರ್ಎಸ್ ಸಂಸ್ಥೆಯ ಅಧ್ಯಯನ ತಿಳಿಸಿದೆ. ಆ ಕುರಿತ ವರದಿ ಇಲ್ಲಿದೆ:
ವರದಿಯಲ್ಲಿ ಏನಿದೆ?
ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ಸಂಸ್ಥೆಯ'ರಾಜ್ಯಗಳ ಹಣಕಾಸು ಸ್ಥಿತಿಗತಿ 2026-27 ವರದಿಯು ಭಾರತದ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಆದಾಯ ಕೊರತೆ, ನಿಧಾನಗತಿಯ ಎಸ್ಜಿಎಸ್ಟಿ ಬೆಳವಣಿಗೆ ಮತ್ತು ಬದ್ಧ ವೆಚ್ಚಗಳಿಂದಾಗಿ ತೀವ್ರ ಆರ್ಥಿಕ ಒತ್ತಡ ಉಂಟಾಗುತ್ತಿದೆ ಎಂದು ಎಚ್ಚರಿಸಿದೆ. ರಾಜ್ಯಗಳ ಒಟ್ಟು ಸಾಲವು ಜಿಡಿಪಿಯ 28% ರಷ್ಟಿದ್ದು, ಇದು 15ನೇ ಹಣಕಾಸು ಆಯೋಗವು ಮಾರ್ಚ್ 2026ಕ್ಕೆ ಅಂದಾಜಿಸಿದ್ದ 32.5% ಕ್ಕಿಂತ ಕಡಿಮೆಯಿದ್ದರೂ, ಆರು ರಾಜ್ಯಗಳ ಸಾಲವು ಅವುಗಳ ಜಿಡಿಪಿಯ 35% ಕ್ಕಿಂತ ಹೆಚ್ಚಾಗಿದೆ.
ನಿತ್ಯದ ವೆಚ್ಚಕ್ಕೇ ಶೇ.80ರಷ್ಟು ಆದಾಯ!
ವರದಿಯಂತೆ, ರಾಜ್ಯಗಳ ಒಟ್ಟು ವೆಚ್ಚದ ಶೇ.80ರಷ್ಟು ಪಾಲು ಸಾಲದ ಮೇಲಿನ ಬಡ್ಡಿ ಮರುಪಾವತಿ, ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಸಬ್ಸಿಡಿಗಳಂತಹ ಅನುತ್ಪಾದಕ (ನಿತ್ಯದ) ವೆಚ್ಚಗಳಿಗೇ ಖರ್ಚಾಗುತ್ತಿದೆ. ಈ ಮೂಲಕ ಆದಾಯದ ಬಹುಪಾಲು ಉಚಿತ ಯೋಜನೆಗಳಿಗೆ ಹರಿದುಹೋಗುತ್ತಿರುವುದರಿಂದ, ಮೂಲಸೌಕರ್ಯ ಮತ್ತು ಬಂಡವಾಳ ವೆಚ್ಚಗಳಂತಹ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಎದುರಾಗುತ್ತಿದೆ. ಇದರೊಂದಿಗೆ, ಆರ್ಥಿಕ ಸಮೀಕ್ಷೆಯ ಮಾಹಿತಿಯಂತೆ, ಕಳೆದ ಕೆಲವು ವರ್ಷಗಳಲ್ಲಿ ಹಲವು ರಾಜ್ಯಗಳ ಆರ್ಥಿಕ ಸಮತೋಲನ ಹದಗೆಟ್ಟಿದ್ದು, ಆದಾಯ ಮಿಗತೆ ಹೊಂದಿದ್ದ ರಾಜ್ಯಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.
ಗ್ಯಾರಂಟಿ ಯೋಜನೆಗಳ ವೆಚ್ಚ ಏರಿಕೆ
ದೇಶಾದ್ಯಂತ ವಿವಿಧ ರಾಜ್ಯಗಳು ಜಾರಿಗೊಳಿಸಿರುವ ಗೃಹಲಕ್ಷ್ಮಿ ಸೇರಿದಂತೆ 128 ಬಗೆಯ ನೇರ ನಗದು ವರ್ಗಾವಣೆ ಯೋಜನೆಗಳಿಗೆ 2026-27ನೇ ಸಾಲಿನಲ್ಲಿ ಸುಮಾರು ₹4 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ, 2022-23ರಲ್ಲಿ ಜಿಡಿಪಿಯ ಶೇ. 0.6 ರಷ್ಟಿದ್ದ ಈ ವೆಚ್ಚ ಈಗ ಜಿಡಿಪಿಯ ಶೇ. 1 ಕ್ಕೆ ತಲುಪಿದೆ. ಇದರೊಂದಿಗೆ, ಕೋವಿಡ್ ಬಳಿಕ ರಾಜ್ಯಗಳ ಆದಾಯ ಕೊರತೆ ನಿಧಾನವಾಗಿ ಹೆಚ್ಚುತ್ತಿದ್ದು, 2022-23ರಲ್ಲಿ ಜಿಡಿಪಿಯ ಶೇ. 0.23 ರಷ್ಟಿದ್ದ ಕೊರತೆ 2025-26ರಲ್ಲಿ ಶೇ. 0.71 ಕ್ಕೆ ಏರಿಕೆಯಾಗಿದೆ. ಜೊತೆಗೆ, ದೇಶದ 10 ರಾಜ್ಯಗಳು ನಿರಂತರವಾಗಿ ಆದಾಯ ಕೊರತೆಯನ್ನು ವರದಿ ಮಾಡುತ್ತಿವೆ. ಇದಲ್ಲದೆ, ಕರ್ನಾಟಕ, ಛತ್ತೀಸ್ಗಢ ಮತ್ತು ತೆಲಂಗಾಣ ಸೇರಿದಂತೆ ಒಟ್ಟು 5 ರಾಜ್ಯಗಳು ಆದಾಯ ಹೆಚ್ಚುವರಿ ಸ್ಥಿತಿಯಿಂದ ಆದಾಯ ಕೊರತೆ ಸ್ಥಿತಿಗೆ ಜಾರಿವೆ.
ಏತನ್ಮಧ್ಯೆ, 2025-26ರಲ್ಲಿ ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ಬಾರಿಗೆ ಜಿಡಿಪಿಗೆ ಹೋಲಿಸಿದರೆ ರಾಜ್ಯ ಜಿಎಸ್ಟಿ (SGST) ಸಂಗ್ರಹದ ಬೆಳವಣಿಗೆ ನಿಧಾನಗೊಂಡಿದೆ. ದೇಶದ 23 ರಾಜ್ಯಗಳಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (GSDP) ಹೋಲಿಸಿದರೆ ಎಸ್ಜಿಎಸ್ಟಿ ಅನುಪಾತ ಕುಸಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ, ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ರಾಜ್ಯಗಳ ಆದಾಯ ಹೆಚ್ಚಿಸುವ ಅಧಿಕಾರದಲ್ಲಿ ಬದಲಾವಣೆಗಳಾಗಿವೆ. ಖನಿಜಯುಕ್ತ ಭೂಮಿ ಮತ್ತು ಹಕ್ಕುಗಳ ತೆರಿಗೆಯ ಮೂಲಕ ರಾಜ್ಯಗಳು 2026-27ರಲ್ಲಿ ರೂ. 26,683 ಕೋಟಿ ಸಂಗ್ರಹಿಸಲು ಬಜೆಟ್ನಲ್ಲಿ ಅಂದಾಜಿಸಿವೆ (2024-25ರಲ್ಲಿ ಇದು ರೂ. 5,361 ಕೋಟಿ ಇತ್ತು). ಈ ಆದಾಯದ ಮೂಲದ ಮುಂದುವರಿಕೆಯು ಈಗ ಕೇಂದ್ರ ಸರ್ಕಾರದ ನಿರ್ಧಾರವನ್ನು ಅವಲಂಬಿಸಿದೆ.