ಮುಂಬೈ: ಮಹಾರಾಷ್ಟ್ರದಾದ್ಯಂತ ಆಹಾರ ಮತ್ತು ಔಷಧ ಆಡಳಿತ (FDA) ನಡೆಸಿದ ಕಾರ್ಯಾಚರಣೆಯಲ್ಲಿ, 48 ಲಕ್ಷ ರೂಪಾಯಿ ಮೌಲ್ಯದ ಅವಧಿ ಮೀರಿದ ಮತ್ತು ಹಾನಿಗೊಳಗಾದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ.
ಈ ಸಂಬಂಧ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ರಿಲಯನ್ಸ್ ರಿಟೇಲ್, ಬ್ಲಿಂಕಿಟ್(Blinkit) ಮತ್ತು ಝೊಮ್ಯಾಟೊ ಹೈಪರ್ಪ್ಯೂರ್ (Zomato Hyperpure) ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್ಐಆರ್ (FIR) ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಠಾಣೆಯ ಶಾಂತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಎಫ್ಐಆರ್ನಲ್ಲಿ, ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ರಿಲಯನ್ಸ್ ರಿಟೇಲ್, ಬ್ಲಿಂಕಿಟ್ ಮತ್ತು ಝೊಮ್ಯಾಟೊ ಹೈಪರ್ಪ್ಯೂರ್ಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಹಾಗೂ ಉದ್ಯೋಗಿಗಳು ಸೇರಿದಂತೆ 10 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006' (Food Safety and Standards Act, 2006) ಮತ್ತು 'ಭಾರತೀಯ ನ್ಯಾಯ ಸಂಹಿತೆ, 2023'ರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಈ ಎಫ್ಐಆರ್ ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ ಹೆಸರಿಸಲಾದವರಲ್ಲಿ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ನ ಪೂರ್ಣಾವಧಿ ನಿರ್ದೇಶಕ ವಿ. ಸುಬ್ರಹ್ಮಣಿಯಂ, ಅಶೋಕ್ ಕುಮಾರ್ ಸಿಂಗ್, ರಿಲಯನ್ಸ್ ರಿಟೇಲ್ನ ನಾಮನಿರ್ದೇಶಿತ ವಿಜಯ್ ಭಿಕಾಜಿ ಖರ್ಮಳೆ, ಗೋದಾಮು ವ್ಯವಸ್ಥಾಪಕ ನಿಲೇಶ್ ರಾಮದಾಸರಾವ್ ದೇಶಮುಖ್, ಬ್ಲಿಂಕಿಟ್ ಕಾಮರ್ಸ್ನ ನಿರ್ದೇಶಕ ಅರ್ಬಿಂದರ್ ಸಿಂಗ್ ಧಿನ್ಸಾ ಮತ್ತು ದೀಪಕ್ ಸಿಂಗ್, ಜೊಮ್ಯಾಟೊ ಹೈಪರ್ಪ್ಯೂರ್ನ ಅಬಿದ್ ಶೇಖ್, ಬಿ.ಕೆ. ಡಿಸ್ಪೋಸ್ನ ಬಾಬರ್ ಮಿಯಾ ಅಹ್ಮದ್ ಸಿದ್ದಿಕಿ, ಪೂರೈಕೆದಾರ ಗುಲ್ಜಾರ್ ಅಬ್ದುಲ್ ಖಾನ್, ಭಿವಂಡಿಯ ಚವೀಂದ್ರ ಹಾಗೂ ಡಿಸ್ಕೌಂಟ್ ಸ್ಟೋರ್ನ ಅಬ್ದುಲ್ ಮೊಬಿನ್ ಖಾನ್ ಸೇರಿದ್ದಾರೆ.
ಅಕ್ಟೋಬರ್ 14 ಮತ್ತು 15ರಂದು ನಡೆದ ತಪಾಸಣೆಯಲ್ಲಿ ನಾಶಪಡಿಸಬೇಕಿದ್ದ ಉತ್ಪನ್ನಗಳನ್ನು ವಿಲೇವಾರಿ ಸಂಸ್ಥೆಗಳು, ಪರವಾನಗಿ ಇಲ್ಲದ ವಿಂಗಡಣಾ ಯಾರ್ಡ್ಗಳು ಮತ್ತು ದಲ್ಲಾಳಿಗಳ ಮೂಲಕ ಗ್ರಾಹಕರಿಗೆ ಮಾರಾಟಕ್ಕೆ ತಿರುಗಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಥಾಣೆಯ ಶಾಂತಿ ನಗರ ಠಾಣೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ಹಾಗೂ ಭಾರತೀಯ ನ್ಯಾಯ ಸಂಹಿತೆ, 2023ರ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಾಗಿದೆ.