ಮುಂಬೈ: ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್‌ಡಿಎಫ್‌ಸಿ, ಇಬ್ಬರು ಹಿರಿಯ ಕಾರ್ಯನಿರ್ವಾಹಕರಿಂದ ರಹಸ್ಯ ಮಾಹಿತಿ ಸೋರಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಆಂತರಿಕ ತನಿಖೆ ನಡೆಸುತ್ತಿದೆ.
ಬ್ಯಾಂಕಿನಲ್ಲಿ ಇಬ್ಬರು ಹಿರಿಯ ಅಧಿಕಾರಿಗಳಿಂದ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ‘ಬ್ಲೂಮ್‌ಬರ್ಗ್ ನ್ಯೂಸ್’ ವರದಿ ಮಾಡಿದ ನಂತರ ಆಂತರಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಹಿರಂಗಪಡಿಸಿದ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವಿಷಯದ ಬಗ್ಗೆ ಆಂತರಿಕ ತನಿಖೆಯನ್ನು ಒಪ್ಪಿಕೊಂಡ HDFC ಬ್ಯಾಂಕಿನ ವಕ್ತಾರರು, "ನಮ್ಮ ನೀತಿ ಸಂಹಿತೆಯಲ್ಲಿ ವಿವರಿಸಿರುವಂತೆ ಬ್ಯಾಂಕ್ ಅತ್ಯುನ್ನತ ನೈತಿಕತೆ ಮತ್ತು ಆಡಳಿತದ ಮಾನದಂಡಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ಸಂಭಾವ್ಯ ಉಲ್ಲಂಘನೆಗಳ ಯಾವುದೇ ವರದಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ" ಎಂದು ಹೇಳಿದ್ದಾರೆ.
ಬ್ಯಾಂಕಿನ ವಾಣಿಜ್ಯ ಕಾರ್ಯತಂತ್ರಗಳು ಹಾಗೂ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದಾದ ಮಹತ್ವದ ಮಾಹಿತಿ ಸೋರಿಕೆಯಾಗುತ್ತಿರುವ ಕುರಿತು ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳಲ್ಲಿ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಂತರಿಕ ತನಿಖೆಯನ್ನು ಆರಂಭಿಸಿತ್ತು. ತನಿಖೆಯ ವೇಳೆ ಇಬ್ಬರು ಹಿರಿಯ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ವಕ್ತಾರರು, “ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಾಸ್ತವಾಂಶಗಳನ್ನು ಸಂಗ್ರಹಿಸಿ, ಮೌಲ್ಯಮಾಪನ ಮಾಡಲು ಪ್ರಸ್ತುತ ಆಂತರಿಕ ಪರಾಮರ್ಶೆ ಪ್ರಕ್ರಿಯೆ ನಡೆಯುತ್ತಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಲಭ್ಯವಾಗುವ ವರದಿಯ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಆದರೆ, ತನಿಖಾ ಪ್ರಕ್ರಿಯೆಯ ಪಾವಿತ್ರ್ಯತೆ ಹಾಗೂ ವ್ಯಕ್ತಿಗಳ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ಪ್ರಸ್ತುತ ನಡೆಯುತ್ತಿರುವ ತನಿಖೆಯ ಹೆಚ್ಚಿನ ವಿವರಗಳನ್ನು ನೀಡಲು ಬ್ಯಾಂಕ್ ನಿರಾಕರಿಸಿದೆ.