'ಸಂದೇಶೆ ಆತೀ ಹೈ...' ಹಾಡು ಕೇಳದವರು ಯಾರು? 1997ರ ಯಶಸ್ವಿ ಹಿಂದಿ ಚಿತ್ರ 'ಬಾರ್ಡರ್'ನ ಜನಪ್ರಿಯ ಗೀತೆ ಅದು. ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದವರು ಅನು ಮಲಿಕ್. ಈಗ ಸ್ವಾತಂತ್ರ್ಯ ದಿನಾಚರಣೆ ಹೊತ್ತಲ್ಲಿ ಹೊರಬಿದ್ದಿರುವ ಸಂಗತಿ ಎಂದರೆ 'ಬಾರ್ಡರ್ 2' ಚಿತ್ರಕ್ಕಾಗಿ ನಿದೇರ್ಶಕ ಜೆ.ಪಿ. ದತ್ತಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾರಾಗಣದ ಬಗ್ಗೆ ಅವರು ಬಾಯಿ ಬಿಟ್ಟಿಲ್ಲ. ಆದರೆ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಅನು ಮಲಿಕ್ ಅವರದೇ ಎನ್ನುವುದು ಖಚಿತವಾಗಿದೆ. 'ಅನು, ವಿ ಆರ್ ಆನ್. ಬಿ ರೆಡಿ' ಎಂದು ತಮ್ಮ ಎಂದಿನ ಶೈಲಿಯಲ್ಲಿ ದತ್ತಾ ಸೂಚನೆ ನೀಡಿದ್ದಾರಂತೆ. ಅನು ಮಲಿಕ್ ಪ್ರಕಾರ, ಮುಂದಿನ ದಿನಗಳಲ್ಲಿ 'ಬಾರ್ಡರ್ 3' ಮತ್ತು 'ಬಾರ್ಡರ್ 4' ಕೂಡ ಬರಲಿದ್ದು, ಅದನ್ನು ಗಮನದಲ್ಲಿಟ್ಟುಕೊಂಡೇ ದತ್ತಾ ಕಥೆ ಹೆಣೆಯುತ್ತಿದ್ದಾರೆ.