ತನ್ನ ನಟನೆಯಿಂದ ಗಮನ ಸೆಳೆಯುತ್ತಿರುವ ನಟ ಅರ್ಜುನ್ ರಾಮ್‌ಪಾಲ್. ವೃತ್ತಿ ಬದುಕಿನಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದಾತ. ಪ್ರಕಾಶ್ ಝಾ ನಿರ್ದೇಶನದ 'ಸತ್ಯಾಗ್ರಹ' ಚಿತ್ರದಲ್ಲಿ ಯುವ ರಾಜಕೀಯ ಮುಖಂಡನ ಪಾತ್ರ. ಆದರೆ ರಾಜಕಾರಣ ಎಂದರೆ ಅರ್ಜುನ್‌ಗೆ ಆಗದು. 'ನಮ್ಮ ದೇಶದಲ್ಲಿ ರಾಜಕೀಯ ಎನ್ನುವುದು ಹೊಲಸು ಆಟವಾಗಿದೆ. ಹೊಸಬರು ರಾಜಕೀಯಕ್ಕೆ ಧುಮುಕಲು ಮೀನಮೇಷ ಎಣಿಸುತ್ತಿದ್ದಾರೆ. ಕೆಸರಿನ ಕೂಪಕ್ಕೆ ಇಳಿಯುವುದು ಏಕೆ ಎನ್ನುವುದೇ ಹೆಚ್ಚಿನವರ ಭಾವನೆ. ಇಂಥ ಸನ್ನಿವೇಶ ನಿಜಕ್ಕೂ ನಿರಾಸೆ ಮೂಡಿಸುತ್ತದೆ' ಎಂದಿದ್ದಾನೆ ಅರ್ಜುನ್. ಹಾಗಂತ ಪಾತ್ರ ಮಾಡುವುದು ಅವನಿಗೆ ಕಷ್ಟವಾಗಿಲ್ಲವಂತೆ. ನಟ ಏನಿದ್ದರೂ ನಿರ್ದೇಶಕನ ಕೈಗೊಂಬೆ ಎನ್ನುವುದು ಆತನ ಅಭಿಪ್ರಾಯ. 'ಸತ್ಯಾಗ್ರಹ' ಶೀಘ್ರವೇ ತೆರೆ ಕಾಣಲಿದೆ.