ಬಾಲಿವುಡ್‌ನ ಝಲಕ್ ಮಾಧುರ್ಯದ ನಗುವಿನ ರಾಣಿ ಮಾಧುರಿ ಮತ್ತೆ ಸಿನಿರಂಗಕ್ಕೆ ಲಗ್ಗೆ ಹಾಕಲಿದ್ದಾಳೆ. 'ದೇವದಾಸ್' ನಂತಹ ಹಿಟ್ ಚಿತ್ರದಲ್ಲಿ ಮಿಂಚಿದ್ದ ಮಾಧುರಿ ಈಗ ಮತ್ತೆ ಎರಡನೇ ಇನ್ನಿಂಗ್ಸ್ ಗಾಗಿ 'ದೇದ್ ಇಷ್ಕಿಯಾ' ದಲ್ಲಿ ನಟಿಸಿ ಮತ್ತೊಮ್ಮೆ ಅಭಿಮಾನಿಗಳ ಹೃದಯದ ಕದವನ್ನು ಬಡಿದಿದ್ದಾಳೆ. ಜಗತ್ಪ್ರಸಿದ್ಧ ಕಲಾವಿದ ಎಮ್.ಎಫ್.ಹುಸೇನ್‌ರಿಂದ ಸೌಂದರ್ಯದ ಖನಿ ಎಂದು ಕರೆಸಿಕೊಂಡಿದ್ದಲ್ಲದೆ, ನೃತ್ಯದ ಬಗ್ಗೆಯೂ ಪ್ರಶಂಸೆ ಪಡೆದುಕೊಂಡಿದ್ದ ಆಕೆ, ಹುಸೇನ್ ನಿರ್ದೇಶನದ 'ಗಜ ಗಾಮಿನಿ'ಯಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಳು. 'ತೇಜಾಬ್' ಚಿತ್ರದಿಂದ ರಸಿಕರ ಮನದಲ್ಲಿ ನೆಲೆ ನಿಂತ ಮಾಧುರಿ ಮದುವೆಯಾಗಿ ಹೊರನಾಡಿಗೆ ಹಾರುವವರೆಗೂ ಯಾರಿಗೂ ಮೊದಲ ಸ್ಥಾನವನ್ನು ಬಿಟ್ಟು ಕೊಟ್ಟಿರಲಿಲ್ಲ. ತನ್ನದೇ ಆದ ಅಭಿಮಾನಿ ವೃಂದವನ್ನು ಹೊಂದಿದ್ದ ಮಾಧುರಿ ದಿಲ್, ಸಾಜನ್, ಬೇಟಾ, ಹಮ್ ಆಪ್ಕೆ ಹೈ ಕೌನ್, ದಿಲ್ ತೋ ಪಾಗಲ್ ಹೈ, ಚಿತ್ರಗಳಲ್ಲಿ ಅಭಿಮಾನಿಗಳ ಮನ ಸೂರೆಗೊಂಡಿದ್ದ ಮಾಧುರಿ ಮತ್ತೇ ಅದೇ ತರಹದ ಮೋಡಿ ಮಾಡುವಳೇ ಕಾದು ನೋಡಬೇಕು.