ಮುಗ್ಧ ನಗೆಯ ಪ್ರಾಚಿ ದೇಸಾಯಿ ನಗುವಿನಲ್ಲಿ ಈಗ ಮತ್ತಷ್ಟು ಖುಷಿ ಬೆರೆತಿದೆ. ಅದಕ್ಕೆ ಕಾರಣ ಆಕೆಗೆ ಮೊದಲ ಸಲ ಬಾಲಿವುಡ್ನಲ್ಲಿ ತನ್ನ ವಯೋವಾನಕ್ಕೆ ತಕ್ಕ ಪಾತ್ರ ಸಿಕ್ಕಿರುವುದು. ತನ್ನ ಎಂಟ್ರಿ ಸಿನಿಮಾ 'ರಾಕ್ ಆನ್', ನಂತರ ಬಂದ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಮತ್ತಿತರ ಚಿತ್ರಗಳಲ್ಲಿ ಆಕೆಗೆ ವಯೋವಾನ ಮೀರಿದ ಪಾತ್ರಗಳೇ ಸಿಕ್ಕಿದ್ದವು. ಈಗ 'ಪೊಲೀಸ್ ಗರ್ಲ್'ನಲ್ಲಿ ಅವಳದು ಅವಳ ವಯಸ್ಸಿಗೆ ಸರಿ ಹೊಂದುವ ಪಾತ್ರವಂತೆ.
'ಕೊನೆಗೂ ನನಗೆ ಇಂತಹ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಇದರಲ್ಲಿ ನನ್ನದು ಸಾಫ್ಟ್ವೇರ್ ಎಂಜಿನಿಯರ್ ಪಾತ್ರ. ಒಂಥರಾ ವಿದ್ಯುತ್ ಪ್ರವಹಿಸುವ ತಂತಿಯಂಥ ಪಾತ್ರ. ಸಂಜೂಬಾಬಾ (ಸಂಜಯ್ದತ್) ಜತೆ ನಟಿಸ್ತಿರೋದು ಇನ್ನಷ್ಟು ಥ್ರಿಲ್ ಉಂಟುಮಾಡಿದೆ' ಅಂತಾಳೆ ಪ್ರಾಚಿ. ಕಿರುತೆರೆ ನಿರೂಪಕಿಯಿಂದ ಧಾರಾವಾಹಿಗಳಿಗೆ ಬಡ್ತಿ ಪಡೆದಿದ್ದ ಪ್ರಾಚಿಗೆ 'ಪೊಲೀಸ್ಗರ್ಲ್' ಬಾಲಿವುಡ್ನಲ್ಲಿ ತಿರುವು ಕೊಡುತ್ತದೆ ಎನ್ನುವ ವಿಶ್ವಾಸ.