ಕೆಂಪು ಉಡುಗೆಯಲ್ಲಿ ಮಿಂಚುತ್ತಿದ್ದ ಪ್ರಿಯಾಂಕಾ ಚೋಪ್ರಾ ಮುಖದಲ್ಲಿ ಸ್ವಲ್ಪ ಖುಷಿ, ತುಸು ಬೇಸರ. ಗಾಯಕಿಯಾಗಿ ಮೊದಲ ಪ್ರಯತ್ನದಲ್ಲೇ 'ಇನ್ ಮೈ ಸಿಟಿ' ಆಲ್ಬಂಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ಸಂತಸ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ 'ಬರ್ಫಿ' ಚಿತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಆಕೆಯ ನಿರಾಸೆ. 'ಶೂಟೌಟ್ ಅಟ್ ವಾಡಾಲಾ'ದ ಐಟಂ ಸಾಂಗ್ 'ಬಬ್ಲಿ ಬದ್ಮಾಶ್' ಹಾಡಿನ ಲಾಂಚಿಂಗ್ ಕಾರ್ಯಕ್ರಮದಲ್ಲಿ ಮನದಾಳ ಹೊರಗಿಟ್ಟಳು ನಟಿ.
'ಐಟಂ ಸಾಂಗ್' ಎಂಬ ಪದಬಳಕೆ ಒಪ್ಪದ ಪ್ರಿಯಾಂಕಾ, 'ಇದು ವಿಶೇಷ ಗೀತೆ. ಇಂತಹ ಹಾಡುಗಳಿಗೆ ಕುಣಿಯುವ ಅವಕಾಶ ಸಿಕ್ಕರೆ ಮೀನಮೇಷ ಎಣಿಸದೆ ಒಪ್ಪಿಕೊಳ್ಳುವೆ' ಎನ್ನುವ ದಿಟ್ಟೆ. 'ದಬಾಂಗ್'ನ 'ಫೆವಿಕಾಲ್ ಸೆ..' ಹಾಡು ಸಿಕ್ಕಾಪಟ್ಟೆ ಹಿಡಿಸಿಬಿಟ್ಟಿದೆ ಎಂದೂ ಹೇಳಿಕೊಂಡಳು ಪ್ರಿಯಾಂಕಾ.