'ಗ್ಯಾಂಗ್ಸ್ಟರ್' ಚಿತ್ರದ ಮೂಲಕ ಬೆಳಕಿಗೆ ಬಂದ 26ರ ಹರೆಯದ ಬಾಲಿವುಡ್ ನಟಿ ಕಂಗನಾ ರಣಾವತ್ ಮೊನ್ನೆ ಪಿ ಅಂಡ್ ಜಿ ಕಂಪನಿ ತಾಯಂದಿರ ದಿನದ ಅಂಗವಾಗಿ ಆಯೋಜಿಸಿದ್ದ 'ಥ್ಯಾಂಕ್ ಯೂ ಮಾಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವಾರ ಬಿಡುಗಡೆಯಾಗಿರುವ ಸಂಜಯ್ ಗುಪ್ತಾ ನಿರ್ದೇಶನದ 'ಶೂಟೌಟ್ ಅಟ್ ವಡಾಲಾ' ಚಿತ್ರದಲ್ಲಿ ಜಾನ್ ಅಬ್ರಹಾಂ ಎದುರು ಕಾಣಿಸಿಕೊಂಡಿರುವ ಕಂಗನಾ ಬಾಲಿವುಡ್ನಲ್ಲಿ ಸದ್ಯಕ್ಕೆ ಫುಲ್ ಬ್ಯುಸಿ. ಇದಾದ ನಂತರ ಸನ್ನಿ ಡಿಯೋಲ್ ನಾಯಕತ್ವದ 'ಐ ಲವ್ ನ್ಯೂ ಇಯರ್' ಚಿತ್ರದಲ್ಲೂ ಕಂಗನಾ ನಾಯಕಿಯಾಗಲಿದ್ದಾಳೆ. ಆದರೆ, ತನ್ನ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತನ್ನ 'ಮಾ' ಬಗೆಗೆ ಮಾತನಾಡಲು ಕಂಗನಾಗೆ ಸಮಯವಿತ್ತು. ಹಾಗಾಗಿ, ಮೊನ್ನೆ ನಡೆದ 'ಥ್ಯಾಂಕ್ ಯೂ ಮಾಮ್' ಕಾರ್ಯಕ್ರಮದಲ್ಲಿ ತನ್ನ ಬಾಲ್ಯ ಮತ್ತು ತಾಯಿ ಆಶಾ ಬಗೆಗೆ ಹಲವು ವಿಷಯಗಳನ್ನು ಹೇಳಿಕೊಂಡ ಕಂಗನಾ, ತಾಯಿ ನುಡಿಯನ್ನು ಪಾಲಿಸಿದ್ದರಿಂದಲೇ ಇಂದು ತಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದು ಖುಷಿಯಿಂದಲೇ ಬಾಲ್ಯದ ಹಲವು ಸಂಗತಿಗಳನ್ನು ಎಲ್ಲರೆದುರು ಹಂಚಿಕೊಂಡರು. ಅಲ್ಲಿ ಕಂಗನಾ ಹೇಳಿದ ಕೆಲವು ಮಾತುಗಳು ಇಲ್ಲಿವೆ.
ನನಗೆ ಜೀವನದ ಮೂಲಪಾಠ ಹೇಳಿಕೊಟ್ಟಿದ್ದು ನನ್ನ ತಾಯಿ ಆಶಾ. ಆಕೆಗೆ ಥ್ಯಾಂಕ್ಸ್. ಪ್ರೀತಿಗಿಂತ ಹೆಚ್ಚಾಗಿ ನನಗೆ ನನ್ನ ತಾಯಿಯ ಕಟ್ಟುನಿಟ್ಟಿನ ವ್ಯಕ್ತಿತ್ವ ಕಂಡರೆ ಭಯ.
ಎಲ್ಲ ತಾಯಂದಿರೂ ಮಕ್ಕಳಿಗೆ ಲಾಲಿ ಹಾಡುತ್ತಾರೆ, ಊಟ ಮಾಡಿಸುತ್ತಾರೆ. ಆದರೆ, ನನಗೆ ನನ್ನ ತಾಯಿಯ ಲಾಲಿ ಹಾಡಿಗಿಂತ ಚಿಕ್ಕವಳಿದ್ದಾಗ ಆಕೆ ನನ್ನ ಮೇಲೆ ಹೇರುತ್ತಿದ್ದ ಕಟ್ಟುಪಾಡುಗಳೇ ಹೆಚ್ಚು ನೆನಪಿವೆ. ಒಮ್ಮೊಮ್ಮೆ ಅಮ್ಮನಿಂದ ಪೊರಕೆಯಲ್ಲಿ ಏಟು ತಿಂದಿದ್ದೂ ಉಂಟು.
ನನ್ನ ತಾಯಿ ಸಂಸ್ಕೃತ ಟೀಚರ್ ಆಗಿದ್ದರು. ನಾನಷ್ಟೇ ಅಲ್ಲ, ಶಾಲೆಯ ಎಲ್ಲ ಮಕ್ಕಳೂ ಆಕೆಯನ್ನು ಕಂಡರೆ ಹೆದರುತ್ತಿದ್ದರು.
ನನ್ನ ತಾಯಿ ನನಗೆ ಎಂಥ ಜೀವನದ ತರಬೇತಿ ಕೊಟ್ಟಿದ್ದಾಳೆ ಎಂದರೆ ನಾನು ನಾಳೆ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿಬಿಟ್ಟರೂ ಬದುಕುವುದು ಹೇಗೆ ಎಂಬುದು ನನಗೆ ಗೊತ್ತು.
ನನ್ನ ತಾಯಿ ನನಗೆ ನಟನೆಯೊಂದನ್ನು ಬಿಟ್ಟು ಎಲ್ಲವನ್ನೂ ಹೇಳಿಕೊಟ್ಟಿದ್ದಾಳೆ. ನನಗೆ ಅಡಿಗೆ ಮಾಡಲೂ ಬರುತ್ತದೆ, ಪಾತ್ರೆ ತೊಳೆಯಲೂ ಬರುತ್ತದೆ. ಸಣ್ಣವಳಿದ್ದಾಗ ನನ್ನ ವರ್ತನೆ ನೋಡಿ 'ನಾಳೆ ಮದುವೆಯಾಗಿ ಗಂಡನ ಮನೆಗೆ ಹೋದರೆ, ನಮ್ಮ ಮನೆಯ ಮರ್ಯಾದೆ ತೆಗೆಯುತ್ತೀಯ' ಎಂದು ಬಯ್ದು ಎಲ್ಲವನ್ನೂ ಹೇಳಿಕೊಡುತ್ತಿದ್ದಳು ನನ್ನ ಅಮ್ಮ.
-ಹರಿ