ಬಾಲಿವುಡ್

ಮಿಲಿಂದ್ ಶೋಮ್ಯಾನ್

ಮಿಲಿಂದ್ ಸೊಮನ್ ಬಹುಶಃ ಭಾರತದ ಮೊದಲ ಸೂಪರ್ ಮಾಡೆಲ್. ಈಗಲೂ ಮ್ಯಾರಥಾನ್ ಓಟ ಅಂದ್ರೆ ನಿದ್ದೆಗಣ್ಣಲ್ಲಿಯೂ...

ವಯಸ್ಸು ಅರ್ಧಶತಕದ ಅಂಚಿನಲ್ಲಿದೆ. ಕಟ್ಟುಮಸ್ತಾದ ದೇಹ ಅವರಿಗಿನ್ನೂ ಇಪ್ಪತ್ತು ಎನ್ನುವಂತಿದೆ. ಮಿಲಿಂದ್ ಸೊಮನ್ ಬಹುಶಃ ಭಾರತದ ಮೊದಲ ಸೂಪರ್ ಮಾಡೆಲ್. ಈಗಲೂ ಮ್ಯಾರಥಾನ್ ಓಟ ಅಂದ್ರೆ ನಿದ್ದೆಗಣ್ಣಲ್ಲಿಯೂ ಟ್ರಾಕ್ಸ್ ಮತ್ತು ಷೂಸ್ ಹಾಕಿಕೊಂಡು ರೆಡಿಯಾಗಿ ಬಿಡುವ ಉತ್ಸಾಹಿ. ಮಿಲಿಂದ್ ಕಳೆದ ವರ್ಷ ಕೇವಲ  ಮೂವತ್ತು ದಿನಗಳಲ್ಲಿ ಒಂದೂವರೆ ಸಾವಿರ ಕಿಲೋಮೀಟರ್ ಮ್ಯಾರಥಾನ್ ಓಡಿ ಲಿಮ್ಕಾ ದಾಖಲೆ ಪುಸ್ತಕ ಸೇರಿರುವುದು ಅವರ ಫಿಟ್ನೆಸ್‌ನ ದ್ಯೋತಕ. ಅದು ಶಿಸ್ತಿನ ಬದುಕು ಅವರಿಗೆ ಕೊಟ್ಟಿರುವ ರಿವಾರ್ಡು ಎನ್ನಲೂ ಅಡ್ಡಿಯಿಲ್ಲ. ಸಿನಿಮಾ, ಧಾರಾವಾಹಿ ನಿರ್ಮಾಣ, ಜಾಹೀರಾತು, ನಟನೆ, ಓಟ, ಈಜು, ಪ್ರವಾಸ ಹೀಗೆ ದಣಿವರಿಯದಂತೆ ಚಟುವಟಿಕೆಗಳಲ್ಲಿ ಮುಳುಗಿರುವ ಮಿಲಿಂದ್, ಮಹಿಳೆಯರಿಗಾಗಿಯೇ ಮ್ಯಾರಥಾನ್ ಆಯೋಜಿಸಿ ಆ ಮೂಲಕ ಆರೋಗ್ಯ ನಿಧಿ ಮತ್ತು ಸ್ತನ ಕ್ಯಾನ್ಸರ್ ನಿಧಿಗೆ ದೇಣಿಗೆ ಸಲ್ಲಿಸುತ್ತಿದ್ದಾರೆ.
ಪುರುಷರ ಸೌಂದರ್ಯವರ್ಧಕಗಳನ್ನು ಉತ್ಪಾದಿಸುವ ಪ್ರಾಕ್ಟರ್ ಮತ್ತು ಗ್ಯಾಂಬಲ್ ಕಂಪನಿಯ 'ಓಲ್ಡ್ ಸ್ಪೈಸ್‌' ಸುಗಂಧದ್ರವ್ಯಗಳ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದರು ಮಿಲಿಂದ್. ಉತ್ಪನ್ನದ ಜಾಹೀರಾತೇ ಹೇಳುವಂತೆ  'ಸ್ಮೆಲ್  ಮಂಟಾಸ್ಟಿಕ್‌' ಪದಕ್ಕೆ ಅನ್ವರ್ಥವಾಗಿ ವಾತಾವರಣ ಸುಗಂಧ ಭರಿತವಾಗಿತ್ತು. 'ಓಲ್ಡ್ ಸ್ಪೈಸ್  ಅಂದ್ರೆ ಸ್ಮೆಲ್ ಮಂಟಾಸ್ಟಿಕ್! ಮಂಟಾಸ್ಟಿಕ್ ಅಂದ್ರೆ? ಅಂದ್ರೆ ಮಿಲಿಂದ್. ಫಂಟಾಸ್ಟಿಕ್ ಮತ್ತು ಮ್ಯಾನ್ ಎಂಬ ಎರಡು ಪದ ಸೇರಿಸಿ ಮಂಟಾಸ್ಟಿಕ್ ಆಗಿದೆ. ಈಗ ಹೇಳಿ ನಾನು ಮಂಟಾಸ್ಟಿಕ್ ತಾನೆ' ಎನ್ನುತ್ತ ನಗು ಸೂಸಿದರು ಮಿಲಿಂದ್. ಅವರ ಜತೆಗಿದ್ದವರು ನಮ್ಮ ಗುಳಿಕೆನ್ನೆ ಚೆಲುವ ದಿಗಂತ್. ಕಾರ್ಯಕ್ರಮದ ಬಳಿಕ ಬೈಟು ಕಾಫಿ ಜತೆ ಮಾತಿಗೆ ಸಿಕ್ಕರು ಮಿಲಿಂದ್.

ನಿಜ್ವಾಗ್ಲೂ ವಯಸ್ಸು ನಲವತ್ತೇಳಾ  ನಿಮ್ಗೆ?
ಹಹ್ಹಹ...ನೋಡಿದ್ರೆ ಅನ್ನಿಸೋಲ್ವಾ? ಖಂಡಿತವಾಗಲೂ ನನಗೆ ನಲವತ್ತೇಳೇ. ಆದರೆ ಮಾನಸಿಕ ಮತ್ತು ದೈಹಿಕವಾಗಿ ನನಗಿನ್ನೂ ಇಪ್ಪತ್ತೇಳು ಅಷ್ಟೆ!

ಸ್ಕಾಟ್ಲೆಂಡಲ್ಲಿ ಹುಟ್ಟಿ ಇಂಗ್ಲೆಂಡಲ್ಲಿ ಬೆಳೆದು ಮುಂಬೈಗೆ ಬಂದು ಸೆಟ್ಲ್ ಆದವ್ರು ನೀವು. ಗೋವಾದಲ್ಲೂ ಇದ್ದಿರಿ. ಯಾವ ಜಾಗ ತುಂಬ ಇಷ್ಟ?
ಮುಂಬೈಲಿ ಹೆಚ್ಚು ಕಾಲದಿಂದ ಇರೋದ್ರಿಂದ ಅದೇ ನನಗೆ ಹೋಮ್ ಟೌನ್.

ಬೆಂಗಳೂರು ಬಗ್ಗೆ ಏನಂತೀರಿ?
ಹೇಯ್.. ಬೆಂಗಳೂರು ಕೂಡ ನನ್ನ ಫೇವರಿಟ್ ಸಿಟಿ. ಆಗಾಗ ಬರುತ್ತಿರುತ್ತೇನೆ. ಇಲ್ಲಿ ನನ್ನ ಹಲವು ಗೆಳೆಯರಿದ್ದಾರೆ,  ಫ್ಯಾಷನ್ ಶೋಗಳು ನಡೆಯುತ್ತಿರುತ್ತವೆ. ನನ್ನ ಸ್ವಿಮ್ಮಿಂಗ್ ಗೆಳೆಯರು ಕೂಡ ಇಲ್ಲೇ ಹೆಚ್ಚು ಮಂದಿಯಿರೋದು.

ಹಾಂ.. ನಿಮ್ಮ ಸ್ವಿಮ್ಮಿಂಗ್ ಹವ್ಯಾಸದ ಬಗ್ಗೆ ಹೇಳಿ.
ನಿಜ ಹೇಳ್ಬೇಕಂದ್ರೆ ಸ್ವಿಮ್ಮಿಂಗ್ ನನ್ನ ಹವ್ಯಾಸ ಅಲ್ಲ, ಅದು ಈಗ ನನ್ನ ದಿನಚರಿಯ ಭಾಗ. ಮೊದಲು ಅದು ನನ್ನ ವೃತ್ತಿ ಜೀವನ ಎಂಬಂತಾಗಿತ್ತು. ನಿಮಗೆ ಗೊತ್ತಲ್ವ, ನಾನು 1984ರಲ್ಲಿ ನ್ಯಾಷನಲ್ ಲೆವೆಲ್ ಸ್ವ್ವಿಮ್ಮಿಂಗ್ ಚಾಂಪಿಯನ್.

ಅಲಿಶಾ ಚಿನಾಯ್ ಅವರ ಮೇಡ್ ಇನ್ ಇಂಡಿಯಾ ಆಲ್ಬಮ್ಮಿನ  ಮಾಯಾಪೆಟ್ಟಿಗೆಯಿಂದ ಆಚೆ ಬಂದು ಬಾಲಿವುಡ್ ಮತ್ತು ಮಾಡೆಲಿಂಗ್ ಲೋಕಕ್ಕೆ ದೊಡ್ಡಮಟ್ಟದಲ್ಲಿ ಎಂಟ್ರಿ ಕೊಟ್ಟವರು ನೀವು. ಆಗ ನಿಮ್ಮ ಅಂಗಸೌಷ್ಟವ ಹೇಗಿತ್ತೋ ಈಗ್ಲೂ ಹಾಗೇ ಇದೆಯಲ್ಲ. ಏನಿದರ ಗುಟ್ಟು?
ಹಹ್ಹಹ.. ಗುಟ್ಟು ಅಂತೇನಿಲ್ಲ. ನಾನು ನನ್ನ ದೇಹವನ್ನು ಅತೀವವಾಗಿ ಪ್ರೀತಿಸುತ್ತೇನೆ. ನೀವೂ ನಿಮ್ಮ ದೇಹವನ್ನು ಪ್ರೀತಿಸಿ ನೋಡಿ. ನಿಮ್ಮ ದೇಹಕ್ಕೆ ಮುಪ್ಪು ಕವಿಯುವುದೇ ಇಲ್ಲ.

ಟಫ್ ಶೂ ಜಾಹೀರಾತಲ್ಲಿ ಹೆಬ್ಬಾವು ಮೈಮೇಲೆ ಸುತ್ಕೊಂಡು ಪೋಸ್ ನೀಡಿದ್ರಲ್ಲ. ಏನಾಯ್ತು ಆ ಕಥೆ?
ಗೊತ್ತಿಲ್ಲ. ನೀವು ಆ ಹೆಬ್ಬಾವನ್ನೇ ಕೇಳಬೇಕು. ಬಹುಶಃ ಆ ಹೆಬ್ಬಾವು ನೂರಾರು ಮರಿಗಳನ್ನು ಸೃಷ್ಟಿಸಿ ಸುಖವಾಗಿ ಕಾಡಲ್ಲಿರಬಹುದು.

ಮ್ಯಾರಥಾನ್‌ನಲ್ಲಿ ಲಿಮ್ಕಾ ರೆಕಾರ್ಡ್ ಆಯ್ತು. ಮುಂದೆ?
ಜಗತ್ತಿನ ಅತಿ ದೊಡ್ಡ ಮ್ಯಾರಥಾನ್ ನಡೆಸಬೇಕು ಮತ್ತು ಅದರಲ್ಲಿ ನಾನೂ ಭಾಗವಹಿಸಬೇಕೆಂಬ ಕನಸಿದೆ.

ಎಲ್ಲ ರೀತಿಯ ಬಟ್ಟೆ ನಿಮಗೆ ಒಪ್ಪುತ್ತದೆ. ಆದರೆ ನಿಮಗೆ ಯಾವ ರೀತಿ ಬಟ್ಟೆ ತುಂಬ ಇಷ್ಟ?
ಹುಟ್ಟುಡುಗೆಯಷ್ಟು ಬೆಸ್ಟ್ ಫೀಲ್ ಯಾವುದರಲ್ಲಿ ಸಿಕ್ಕೀತು! ಹೂಂ, ಮಿಕ್ಕಂತೆ ನನಗೆ ರನ್ನಿಂಗ್ ಟ್ರಾಕ್ಸ್ ಅಚ್ಚುಮೆಚ್ಚು.

ಅಂದಹಾಗೆ ಮಿಲಿಂದ್ ಕಾಣಿಸಿಕೊಂಡಿರುವ 'ಓಲ್ಡ್ ಸ್ಪೈಸ್‌' ಉತ್ಪನ್ನದ ಪ್ರತಿ ಜಾಹೀರಾತೂ ಯೂಟ್ಯೂಬಲ್ಲಿ  ಒಂದು ಮಿಲಿಯನ್‌ಗಿಂತ ಹೆಚ್ಚು  ಹಿಟ್ಸ್ ಪಡೆದುಕೊಂಡಿದೆಯಂತೆ. ಹಾಗಾಗಿ  ಮಿಲಿಂದ್ ಅವರನ್ನು ಮಿಲಿಯನ್ ಹಿಟ್ಸ್  ಮಿಲಿಂದ್ ಅನ್ನಬಹುದಲ್ಲವೇ?

- ನವೀನ್ ಸಾಗರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!