ಏಕೋ ಕತ್ರೀನಾಳ ಟೈಮ್ ಸರಿ ಇದ್ದಂಗೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಬೀಚ್ನಲ್ಲಿ ರಣಬೀರ್ ಕಪೂರ್ ಜತೆ ಇದ್ದ ಫೋಟೊಗಳು ಮಾಧ್ಯಮಗಳಲ್ಲಿ ಜಗಜ್ಜಾಹೀರಾಗಿ ವಿಚಲಿತಗೊಂಡಿದ್ದ ಕತ್ರೀನಾ, ಈಗ ವಾಣಿ ಕಪೂರ್ ಎಂಬ ನವನಟಿಯಿಂದ ಭಯಪಡುವಂತಾಗಿದೆ. ಕೆಲವು ವರ್ಷಗಳಿಂದ ಶಾರುಖ್ ಖಾನ್ ಜತೆ ಪ್ರತಿಷ್ಠಿತ ಸೋಪು ತಯಾರಿಕೆ ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದ ಕತ್ರೀನಾಳ ಜಾಗವನ್ನು ವಾಣಿ ಆಕ್ರಮಿಸಿಕೊಳ್ಳುತ್ತಿದ್ದಾಳೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕತ್ರೀನಾಳ ಬ್ರಾಂಡ್ ಅಂಬಾಸಿಡರ್ ಕಾಂಟ್ರ್ಯಾಕ್ಟ್ ಅವಧಿಯೂ ಮುಗಿದಿದ್ದು, ನವೀಕರಣಕ್ಕೆ ಸಂಸ್ಥೆ ಆಸಕ್ತಿ ತೋರುತ್ತಿಲ್ಲ ಎನ್ನುವ ವದಂತಿಗಳಿವೆ. ಕೆಲವು ದಿನಗಳ ಹಿಂದೆ ಈ ಜಾಗಕ್ಕೆ ದೀಪಿಕಾ ಪಡಕೋಣೆ ಹೆಸರು ಕೇಳಿಬರುತ್ತಿತ್ತು. ಆದರೀಗ ಬಾಲಿವುಡ್ಗೆ ಈಗಷ್ಟೇ ಎಂಟ್ರಿ ಕೊಟ್ಟಿರುವ ವಾಣಿ ಕಪೂರ್ ಹೆಸರು ಕೇಳಿ ಬರುತ್ತಿರುವುದು ಎಲ್ಲರೂ ಬೆರಗುಗಣ್ಣಿನಿಂದ ನೋಡುವಂತಾಗಿದೆ.