ಕಾಲ್ಪನಿಕ ಕಥೆಗಳೆಲ್ಲ ಬರಿದಾಗಿವೆಯಾ ಗೊತ್ತಿಲ್ಲ. ಬಾಲಿವುಡ್ ಮಾತ್ರ ರಿಯಲ್ ಸ್ಟೋರಿಗಳ ಬಾಲ ಹಿಡಿದಿದೆ. ಅದರಲ್ಲೂ ದೇಶದಲ್ಲಿ ಬಿರುಗಾಳಿಯೆಬ್ಬಿಸಿದ ಘಟನೆಗಳನ್ನೇ ಲಬಕ್ಕನೆ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ನಿರ್ದೇಶಕರು. ಇಷ್ಟೆಲ್ಲ ಹೇಳಿಬಿಟ್ಟ ಮೇಲೆ ರಾಮ್ಗೋಪಾಲ್ ವರ್ಮಾ ಬಗ್ಗೆಯೇ ಮಾತಾಡ್ತಿರೋದು ಅಂತ ಅಂದ್ಕೋಬೇಡಿ. ಅವರಂತೆ ಆಗಹೊರಟವರು ಇಲ್ಲಿ ಹತ್ತಾರು ಮಂದಿ. ಸುಭಾಷ್ ಘಾಯ್ ಅಂಥವರಲ್ಲಿ ಒಬ್ಬರು.
ಘಾಯ್ ಸದ್ಯಕ್ಕೆ ಕೈ ಹಾಕಿರುವುದು ಸರಬ್ಜಿತ್ ಸಿಂಗ್ರ ಜೀವನ ಕಥೆಗೆ. 22 ವರುಷ ಪಾಕ್ ಜೈಲಿನಲ್ಲಿದ್ದು ಸಹಕೈದಿಗಳಿಂದ ನಿಗೂಢವಾಗಿ ಹತ್ಯೆಗೀಡಾದ ಈ ಭಾರತೀಯ ಬಹುಕಾಲ ಸುದ್ದಿಯಲ್ಲಿದ್ದವರು. ಮೇ 2ರಂದು ಅವರ ಹತ್ಯೆಯಾದ ಕೂಡಲೇ ಇತ್ತ ಘಾಯ್ ಸ್ಕ್ರಿಪ್ಟ್ ಸಿದ್ಧಪಡಿಸಲು ರಾಜೇಶ್ ಬೇರಿ ಅವರಿಗೆ ಸೂಚಿಸಿದರಂತೆ. ಮೊನ್ನೆಯಷ್ಟೇ ಸ್ಕ್ರಿಪ್ಟ್ ಮುಗಿದಿದೆ. ನಂತರ ಎದುರಾದ ಪ್ರಶ್ನೆ, ಸರಬ್ಜಿತ್ ಸಿಂಗ್ರ ಪಾತ್ರವನ್ನು ಯಾರಿಗೆ ವಹಿಸುವುದು? ಅಮಿತಾಭ್ ಬಚ್ಚನ್ರೇ ಇದಕ್ಕೆ ಸೂಕ್ತ ಅಂತಲೂ ತೀರ್ಮಾನಕ್ಕೆ ಬರಲಾಯಿತು. ಬಿಗ್ಬಿ ಕೈಯಲ್ಲೀಗ ಆ ಸ್ಕ್ರಿಪ್ಟ್ ಇದೆ. 'ಓದಿ, ಹೇಗಿದೆ ನೋಡಿಕೊಂಡು ಒಪ್ಪಿಕೊಳ್ಳುವೆ' ಎಂಬ ಭರವಸೆಯೂ ಘಾಯ್ಗೆ ಸಿಕ್ಕಿದೆ. ಅಂದಹಾಗೆ, ಇಲ್ಲಿ ಘಾಯ್ ನಿರ್ಮಾಪಕರು. ಈಶ್ವರ್ಸಿಂಗ್ ಮುಚ್ಚಲ್ ನಿರ್ದೇಶಕರು.
ಸರಬ್ಜಿತ್ ಬಿಡುಗಡೆಗಾಗಿ ಮಾಧ್ಯಮಗಳ ಮುಂದೆ ಕಣ್ಣೀರು ತೋಡಿಕೊಂಡು, ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಅವರ ತಾಯಿ ಮತ್ತು ತಂಗಿ. ಇಲ್ಲಿ ತಂಗಿಯ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳುತ್ತಿದ್ದಾಳೆ. 'ಭಾಗ್ ಮಿಲ್ಖಾ ಭಾಗ್ನಂಥ ಚಿತ್ರಗಳೇ ಇಂದಿನ ಪ್ರೇಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿವೆ. ಲೋಕದ ಸತ್ಯವನ್ನು ತೆರೆದಿಡುವ ಕೆಲಸ ಚಿತ್ರರಂಗದಿಂದ ಆಗಬೇಕಿದೆ. ಅದಕ್ಕಾಗಿ ಸರಬ್ಜಿತ್ ಕಥೆಯನ್ನು ಸಿನಿಮಾ ಮಾಡುತ್ತಿದ್ದೇವೆ' ಎನ್ನುತ್ತಾರೆ ಘಾಯ್.
ಏನೇ ಅನ್ನಿ, ಈ ಸಿನಿಮಾ ಭಾರತೀಯ ಪ್ರೇಕ್ಷಕರಿಗೆ ಹತ್ತಿರವಾಗಬಹುದು. ಆದರೆ, ಪಾಕ್ ಪ್ರಜೆಗಳು ಇದನ್ನು ಸ್ವೀಕರಿಸುವುದು ಅಸಾಧ್ಯದ ಮಾತು.