'ಕ್ವೀನ್' ಚಿತ್ರ ಬಿಡುಗಡೆಯಾದಾಗಿನಿಂದ ನಟಿ ಕಂಗನಾ ರನೌತ್ಗೆ ಸಿಕ್ಕಾಪಟ್ಟೆ ಮದ್ವೆ ಪ್ರಪೋಸಲ್ಸ್ ಬರ್ತಾ ಇದ್ಯಂತೆ. ಚಿತ್ರದ ಮುಗ್ಧ ಮತ್ತು ಸರಳ 'ರಾಣಿ'ಯನ್ನು ಜನ ವಿಪರೀತ ಹಚ್ಚಿಕೊಂಡುಬಿಟ್ಟಿದ್ದಾರಂತೆ. ಆದ್ರೆ ಎಲ್ಲರನ್ನೂ ನಿರಾಸೆಗೊಳಿಸಿರುವ ಕಂಗನಾ, 'ನನಗೆ ಮದುವೆಯ ಬಗ್ಗೆ ಅಂಥಾ ಒಲವಿಲ್ಲ. ಈ ದೇಶದಲ್ಲಿ ವ್ಯಕ್ತಿಪೂಜೆ ಹೆಚ್ಚಿದ್ದು, ಜನ ಪಾತ್ರಗಳನ್ನೇ ನಿಜವೆಂಬಂತೆ ನೋಡುತ್ತಾರೆ. ಚಿತ್ರ ನೋಡುವ ವಿಷಯದಲ್ಲಿ ಪ್ರೇಕ್ಷಕರು ಪಶ್ಚಿಮದೇಶಗಳಷ್ಟು ವಸ್ತುನಿಷ್ಠರಾಗಿಲ್ಲ. ನನ್ನ ಸ್ವಭಾವಕ್ಕೆ 'ರಿವಾಲ್ವರ್ ರಾಣಿ'ಯಂಥ ಪಾತ್ರಗಳೇ ಹೆಚ್ಚು ಹೊಂದುತ್ತವೆ' ಎಂದಿದ್ದಾಳೆ. 'ಕ್ವೀನ್'ನಿಂದ ಸಿಕ್ಕಿದ ಮುಗ್ಧ ಹುಡುಗಿಯ ಪಟ್ಟ ಕಳೆದುಕೊಳ್ಳಲು ಅವಳಿಗೆ ಯಾವುದೇ ಬೇಜಾರಿಲ್ಲವಂತೆ. 'ರಿವಾಲ್ವರ್ ರಾಣಿ'ಯಂಥ ಬಿ-ಗ್ರೇಡ್ ಚಿತ್ರಗಳನ್ನೂ ಒಪ್ಪಿಕೊಳ್ಳುವ ಅವಳ ನಿರ್ಧಾರ ಕೇಳಿ ಕಂಗನಾ ಸಹೋದರಿ ಬೆಚ್ಚಿದ್ದಳಂತೆ. ಆದರೆ ಯಾರೂ ತುಳಿಯದ ಹಾದಿ ಸವೆಸಬಯಸುವ ರಾಣಿಯ ದಿಟ್ಟ ನಿರ್ಧಾರ ಅವಳ ಪ್ರತಿಭೆಯ ಮೇಲಿರುವ ಅಚಲ ವಿಶ್ವಾಸದ ಪ್ರತೀಕವೇ ಸೈ.