ನಟಿ-ನಿರ್ದೇಶಕಿ ಪೂಜಾಭಟ್ ಮತ್ತು ಉದ್ಯಮಿ ಮುನಿಷ್ ಮಖೀಜಾ ದಾಂಪತ್ಯ ಮುರಿದುಬಿತ್ತೆಂಬ ಸುದ್ದಿ ಕಳೆದ ಕೆಲವು ತಿಂಗಳುಗಳಲ್ಲಿ ದಟ್ಟವಾಗಿ ಕೇಳಿ ಬರುತ್ತಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆಗೆ ಮಾತ್ರ ಭಟ್ ಫ್ಯಾಮಿಲಿ ಯಾರ ಕೈಗೂ ಸಿಗುತ್ತಿರಲಿಲ್ಲ.
ಇದು ಕೇವಲ ಗಾಳಿ ಸುದ್ದಿಯಲ್ಲ ಎಂದು ದೃಢವಾಗುತ್ತಿದ್ದಂತೆಯೇ ಮಾಧ್ಯಮಗಳು ಪೂಜಾ ಭಟ್ ಮನೆಯತ್ತ ದೌಡಾಯಿಸಿವೆ. ಮಾಧ್ಯಮದವರೊಂದಿಗೆ ಮುಲಾಜಿಲ್ಲದೇ ಹೌದು ಎಂದು ಒಪ್ಪಿಕೊಂಡ ಪೂಜಾ, ಈ ಸುದ್ದಿ ಟಿವಿ ಮತ್ತು ಪತ್ರಿಕೆಗಳಲ್ಲಿ ಬರುವ ಮೊದಲೇ ತಾನೇ ಬಹಿರಂಗಪಡಿಸಿಬಿಟ್ಟಿದ್ದಾಳೆ.
'ನನ್ನ ಹಿತೈಷಿಗಳು, ಹಿತೈಷಿಗಳಲ್ಲದವರು ಎಲ್ಲರಿಗೂ ನಾನು ನನ್ನ ಪತಿಯಿಂದ ಡಿವೋರ್ಸ್ ಪಡೆಯುತ್ತಿದ್ದೇನೆಂದು ತಿಳಿಸುತ್ತಿದ್ದೇನೆ. ನಮ್ಮ ಹನ್ನೊಂದು ವರ್ಷಗಳ ಸುಖೀ ದಾಂಪತ್ಯ ಈ ಮೂಲಕ ಕೊನೆಗೊಳ್ಳುತ್ತಿದೆ.
ನಾನು ಸಾರ್ವಜನಿಕ ಜೀವನದಲ್ಲಿರುವುದರಿಂದ ನನ್ನ ಇದನ್ನು ನಾನಾಗಿ ಬಹಿರಂಗಪಡಿಸುವುದು ಅಗತ್ಯ ಎನಿಸಿ ಈ ಸುದ್ದಿ ಹಂಚಿಕೊಳ್ಳುತ್ತಿದ್ದೇನೆ' ಎಂದು ಪೂಜಾ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ. ನೆಚ್ಚಿನ ಮಗಳ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮಹೇಶ್ ಭಟ್, 'ಅವಳಿಷ್ಟದಂತೆ ಬದುಕಬೇಕೆಂದು ನಾನು ಅವಳಿಗೆ ಹೇಳಿಕೊಟ್ಟಿದ್ದೇನೆ.
ಹುಟ್ಟು ಅಂದ್ಮೇಲೆ ಸಾವಿರಬೇಕು. ಪ್ರತಿ ಆರಂಭಕ್ಕೂ ಒಂದು ಕೊನೆ ಇರುತ್ತದೆ. ಇದೂ ಹಾಗೆಯೇ. ಇಲ್ಲಿ ಕಣ್ಣಾಮುಚ್ಚಾಲೆ ಆಟದ ಆಗತ್ಯವಿಲ್ಲ' ಎಂದಿದ್ದಾರೆ.