ಮೋಹಕ ನಟ ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲು ಯಾರಿಗೆ ಇಷ್ಟವಿಲ್ಲ ಹೇಳಿ? ಸಲ್ಮಾನ್ನನ್ನು ಮದುವೆಯಾಗಲು ಹುಡುಗಿಯರಂತೂ ತುದಿಗಾಲ ಮೇಲೆ ನಿಂತಿದ್ದಾರೆ. ಚಿತ್ರನಟಿಯರೂ ಇದಕ್ಕೆ ಹೊರತಲ್ಲ. ಈಗ ಆ ಸರದಿಗೆ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಸೇರ್ಪಡೆಗೊಂಡಿದ್ದಾಳೆ. ಆಕೆಗೆ ಸಲ್ಮಾನ್ನನ್ನು ಮದುವೆಯಾಗುವ ಆಸೆಯಂತೆ. ಇದು ಗಾಳಿ ಸುದ್ದಿಯಲ್ಲ. ಖುದ್ದು ತ್ರಿಶಾ ಕಾಫಿ ವಿತ್ ಡಿಡಿಯಲ್ಲಿ ಹೇಳಿಕೊಂಡಿದ್ದಾಳೆ. ಈಕೆ ಮತ್ತು ಜೀನ ನಟಿಸಿರುವ ಎಂದ್ರೆನದ್ರುಂ ಪುನ್ನಗೈ ಚಿತ್ರ ಯಶಸ್ವಿಯಾದ ಖುಷಿಯಲ್ಲಿ ಈ ತಾರಾ ಜೋಡಿಯ ಜೊತೆ ಕಾಫಿ ವಿತ್ ಕಾರ್ಯಕ್ರಮದಲ್ಲಿ ತ್ರಿಶಾ ತನ್ನ ಮನದ ಭಾವನೆಗಳನ್ನು ಹಂಚಿಕೊಂಡಿದ್ದಾಳೆ. ಸಲ್ಮಾನ್ ಏನಾದರೂ ಪ್ರಪೋಸ್ ಮಾಡಿದರೆ ಖಂಡಿತ ಮದುವೆ ಆಗುತ್ತೇನೆ ಎಂದಿದ್ದಾಳೆ. ಸಲ್ಮಾನ್ಗೆ ದಕ್ಷಿಣ ಭಾರತದ ಸುಂದರಿಯನ್ನು ಮದುವೆಯಾಗಲು ಆಸೆಯಿದೆಯಂತೆ. ಹಾಗೊಮ್ಮೆ ಆತ ಹೇಳಿಕೊಂಡದ್ದುಂಟು. ಆ ಅವಕಾಶ ತನಗೆ ಒದಗಿ ಬಂದರೆ ತಪ್ಪಿಸಿಕೊಳ್ಳುವುದುಂಟೆ? ಅಂತ ಆಕೆಯ ಲೆಕ್ಕಾಚಾರ.