ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಗೊಂಚಲುಗಟ್ಟಲೇ ಆಫರ್ ಗಿಟ್ಟಿಸುತ್ತಿರುವ ನಟಿ ಪ್ರಣೀತಾ ಯಾರಿಗೂ ಒಲ್ಲೆ ಅನ್ನುತ್ತಿಲ್ಲವಂತೆ. ತೆಲುಗುಸಿಂಹ ಬಾಲಯ್ಯನಿಗೆ ನಾಯಕಿಯಾಗಲು ಬಂದಿರುವ ಆಫರ್ಗೆ ಕೂಡ ಸೈ ಅಂದಿರೋದು ಲೇಟೆಸ್ಟ್ ಸುದ್ದಿ. ಬಾಲಕೃಷ್ಣನ ಹೊಸ ಚಿತ್ರದಲ್ಲಿ ಆತನ ಮೊದಲ ಹೆಂಡತಿಯ ಪಾತ್ರದಲ್ಲಿ ಪ್ರಣೀತಾ ನಟಿಸುತ್ತಿರುವುದು ಪ್ರೇಕ್ಷಕ ವಲಯದಲ್ಲಿ ಒಂದಷ್ಟು ಲೂಸ್ಟಾಕ್ಗೆ ಎಡೆಮಾಡಿದೆ. ಕೆಲವರು 'ಈ ವಯಸ್ಸಲ್ಲೇ ಬಾಲಯ್ಯನ ಜೊತೆ ನಟಿಸಿದರೆ ಇನ್ಮುಂದೆ ಈಕೆಗೆ 'ಆಂಟಿ' ಪಟ್ಟ ಗ್ಯಾರಂಟಿ... ಇನ್ನು ಆಕೆ ಹಿರಿಯ ನಟರ ಜೋಡಿಯಾಗಲು ಸೀಮಿತಳಾದಂತೆ' ಎಂದು ನಮಿತಾ, ನಯನತಾರಾ ಅವರ ಉದಾಹರಣೆ ಕೊಟ್ಟು ಹೇಳುತ್ತಿದ್ದರೆ, ಇನ್ನು ಕೆಲವರು 'ಪ್ರಣೀತಾ ಈಗಲೇ ಆಂಟಿಯಂತೆ ಕಾಣಿಸುತ್ತಿರುವುದರಿಂದ ಈ ಬಡ್ತಿ ಸಿಕ್ಕಿರೋದು ಸಹಜವೇ' ಅಂತ ಕುಹಕವಾಡುತ್ತಿದ್ದಾರೆ. ಆದರೆ, ಪ್ರಣೀತಾ ಇದ್ಯಾವುದಕ್ಕೂ ಕಿವಿಗೊಡದೆ ಒಳ್ಳೆಯ ಪಾತ್ರಗಳಿಗಷ್ಟೇ ಆದ್ಯತೆ ನೀಡುತ್ತಿದ್ದಾಳಂತೆ.