ಮುಂಬೈ: ಪ್ರವಾಹಪೀಡಿತ ಚೆನ್ನೈ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದ್ದು, ಇದಕ್ಕೆ ಸಹಕರಿಸಿದ ಸೇನೆಯ ಯೋಧರಿಗೆ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟಿ ಅನುಷ್ಕ ಶರ್ಮ ನಮಿಸಿದ್ದಾರೆ. ಜನರನ್ನು ರಕ್ಷಿಸಿದ ಇವರು ನಿಜ ಜೀವನದ ಹಿರೋಗಳು ಎಂದಿದ್ದಾರೆ.
ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗೆ ಪ್ರಶಂಸೆ ತಿಳಿಸಲು ಸೋಮವಾರ ಬಿಗ್ ಬಿ ಮತ್ತು ಅನುಷ್ಕ ಶರ್ಮ ಟ್ವಿಟ್ಟರ್ ಮೊರೆ ಹೋಗಿದ್ದಾರೆ.
"ಚೆನ್ನೈಗಾಗಿ ಅವಿರತವಾಗಿ ಶ್ರಮಿಸಿದ ಸೇನೆ ಮತ್ತು ವಾಯುಪಡೆಯ ಹೀರೋಗಳನ್ನು ನಾವು ಮರೆಯದಿರೋಣ. ಸೆಲ್ಯೂಟ್" ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ.
ಸೇನೆಯ ಹೆಲಿಕ್ಯಾಪ್ಟರ್ ಒಂದರಲ್ಲಿ ಗರ್ಭಿಣಿ ಮಹಿಳೆಯನ್ನು ರಕ್ಷಿಸುತ್ತಿರುವ ಫೋಟೋ ಒಂದನ್ನು ಟ್ವೀಟ್ ಮಾಡಿರುವ ಅನುಷ್ಕ "#ಚೆನ್ನೈಪ್ರವಾಹ ಗರ್ಭಿಣಿ ಮಹಿಳೆಯನ್ನು ಹೆಲಿಕ್ಯಾಪ್ಟರ್ ಒಂದು ರಕ್ಷಿಸುತ್ತಿದೆ. ಇದಕ್ಕೆ ಒಳ್ಳೆಯ ಕೌಶಲ್ಯ ಬೇಕು" ಎಂದು ಬರೆದಿದ್ದಾರೆ.
"ದೇಶವನ್ನು ರಕ್ಷಿಸಲು ಯಾವುದೇ ಸ್ವಹಿತಾಸಕ್ತಿಯಿಲ್ಲದೆ ಸಹಾಯಕ್ಕೆ ಬರುವ ಸೇನೆಗೆ ನನ್ನ ನಮಸ್ಕಾರಗಳು. ಏನೇ ಪರಿಸ್ಥಿತಿ ಇದ್ದರು ಇದನ್ನು ಮರೆಯಬಾರದು" ಎಂದು ಕೂಡ ಅವರು ಬರೆದಿದ್ದಾರೆ.