ಬಾಲಿವುಡ್

ಅಕ್ಷಯ್ ಕುಮಾರ್‌ 'ಬೇಬಿ' ಚಿತ್ರಕ್ಕೆ ಪಾಕ್ ನಿಷೇಧ

Srinivasamurthy VN

ಇಸ್ಲಾಮಾಬಾದ್: ಬಾಲಿವುಡ್‌ ನಟ ಅಕ್ಷಯ್ ಕುಮಾರ್‌ ಅವರು ನಟಿಸಿರುವ 'ಬೇಬಿ' ಚಿತ್ರಕ್ಕೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ.

ಇಸ್ಲಾಮಾಬಾದ್ ಸೆನ್ಸಾರ್ ಮಂಡಳಿ ಬೇಬಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಚಿತ್ರವನ್ನು ನಿಷೇಧಿಸಲಾಗಿದೆ. ಉಗ್ರರನ್ನು ಸದೆಬಡಿಯುವ ಗುಪ್ತಚರ ಇಲಾಖೆಯ ಏಜೆಂಟ್ ನ ಕತೆ ಹೊಂದಿರುವ ಬೇಬಿ ಸಿನಿಮಾದಲ್ಲಿ ಮುಸ್ಲಿಂರ ಭಾವನೆಗೆ ಧಕ್ಕೆಯಾಗುವಂತಹ ಸನ್ನಿವೇಶಗಳಿದೆ ಎಂದು ಆರೋಪಿಸಿ ಚಿತ್ರ ಪ್ರದರ್ಶನಕ್ಕೆ ಅಲ್ಲಿನ ಸೆನ್ಸಾರ್‌ ಬೋರ್ಡ್ ಅನುಮತಿ ನಿರಾಕರಿಸಿದೆ.

"ಚಿತ್ರದಲ್ಲಿ ಮುಸ್ಲಿಮರನ್ನು ನಕಾರಾತ್ಮಕವಾಗಿ ಬಿಂಬಿಸಿರುವ ಹಿನ್ನಲೆಯಲ್ಲಿ ಮತ್ತು ಖಳರ ಪಾತ್ರಗಳಿಗೆ ಮುಸ್ಲಿಂ ಹೆಸರಿರುವ ಕಾರಣದಿಂದ ಸಿನಿಮಾವನ್ನು ಇಸ್ಲಾಮಾಬಾದ್ ಮತ್ತು ಕರಾಚಿಯ ಸೆನ್ಸಾರ್ ಮಂಡಳಿಗಳು ನಿಷೇಧಿಸುವ ನಿರ್ಧಾರಕ್ಕೆ ಬಂದಿವೆ" ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.

ಅಲ್ಲದೆ ಈ ಸಿನಿಮಾದ ಸಿಡಿ ಹಾಗೂ ಡಿವಿಡಿಗಳನ್ನೂ ಇಸ್ಲಾಮಾಬಾದ್‌ನಲ್ಲಿ ನಿಷೇಧಿಸಲಾಗಿದ್ದು, ಸಿನಿಮಾದ ವಿತರಕರಾದ ಎವರ್ ರೆಡಿ ಪಿಕ್ಚರ್‌ನ ಮೂಲಗಳು ಕೂಡ ಬೇಬಿ ಸಿನಿಮಾವನ್ನು ಪಾಕಿಸ್ತಾನದಲ್ಲಿ ನಿಷೇಧಿಸಿರುವುದನ್ನು ಸ್ಪಷ್ಟ ಪಡಿಸಿದ್ದಾರೆ. ಇದಾಗ್ಯೂ ಜನವರಿ 23ರಂದು ಪಾಕಿಸ್ತಾನದಾದ್ಯಂತ ಬೇಬಿ ಸಿನಿಮಾವನ್ನು ತೆರೆಗೆ ತರುವ ಕುರಿತು ಊಹಾಪೋಹಗಳು ಹರಿದಾಡುತ್ತಿದೆಯಾದರೂ, ಕರಾಚಿಯ ಕೆಲ ಚಿತ್ರ ಮಂದಿರಗಳು ತಮ್ಮ ವೆಬ್‌ಸೈಟ್‌ನಿಂದ ಸಿನಿಮಾದ ಪೋಸ್ಟರ್‌ಗಳನ್ನು ತೆಗೆದು ಹಾಕಿವೆ.

ಪಾಕಿಸ್ತಾನದಲ್ಲಿ ಬೇಬಿ ಚಿತ್ರಕ್ಕೆ ನಿಷೇಧ ಹೇರುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಚಿತ್ರ ನಿರ್ದೇಶಕ ನೀರಯ್‌ ಪಾಂಡೆ ಅವರು, ಸಿನಿಮಾದಲ್ಲಿ ಪಾಕಿಸ್ತಾನಿ ವಿರೋಧಿ ಧೋರಣೆ ಹೊಂದಿರುವಂತಹ ಯಾವುದೇ ಸನ್ನಿವೇಶಗಳಿಲ್ಲ. ಚಿತ್ರವೂ ಪಾಕಿಸ್ತಾನ ವಿರೋಧಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಸಲ್ಮಾನ್‌ ಖಾನ್‌ ಅಭಿನಯದ ಏಕ್‌ ಥಾ ಟೈಗರ್‌ ಸಿನಿಮಾವನ್ನು ಕೂಡ ಇಂಥಹುದೇ ಕಾರಣ ನೀಡಿ ನಿಷೇಧಿಸಲಾಗಿತ್ತು.

SCROLL FOR NEXT