ಮೂರ್ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ನಿಂತು ಕೆಳಗೆ ನೋಡಿದರೆ ಸಾಮಾನ್ಯವಾಗಿ ಎಂಥವರಿಗೂ ತಲೆ ತಿರುಗುತ್ತದೆ. ಇನ್ನು ಒಂದು ಕಟ್ಟಡದಿಂದ ಪಕ್ಕದ ಇನ್ನೊಂದು ಕಟ್ಟಡಕ್ಕೆ ಹಗ್ಗದ ಮೇಲೆ ನಡೆದು ಹೋಗುವ ಸಾಹಸವನ್ನು ಊಹಿಸಿಕೊಂಡು ನೋಡಿ ಹೇಗಿರುತ್ತದೆ? ಕೈಕಾಲುಗಳು ಅದುರಿ ಹೋಗುತ್ತವೆ.
ಆದರೆ 70ರ ದಶಕದಲ್ಲಿ ಫಿಲಿಪ್ ಪೆತಿತ್ ಎಂಬ ಅಪೂರ್ವ ಕಲಾವಿದ ನ್ಯೂಯಾರ್ಕ್ ನಗರದಲ್ಲಿ ಆಗ ನಿರ್ಮಾಣವಾಗುತ್ತಿದ್ದ ಅತಿ ಎತ್ತರದ ಅವಳಿ ಕಟ್ಟಡಗಳ (ಡಬ್ಲ್ಯೂಟಿಸಿ ಸೆಂಟರ್) ನಡುವೆ ಕೇಬಲ್ ಬಿಗಿದು 61 ಮೀಟರ್ ಅಂತರವನ್ನು ಆ ತಂತಿಗಳ ಮೇಲೆ ನಡೆದು ದಾಖಲೆ ಬರೆದಿದ್ದ. ಒಂದಲ್ಲ 8 ಬಾರಿ. ಒಂದು ರಾತ್ರಿಯಲ್ಲಿ ಆತ ಅಮೆರಿಕದ ಹೀರೋ ಆಗಿಬಿಟ್ಟ. ರಾಬರ್ಟ್ ಝೆಮಿಕ್ಸ್ ಈ ಸತ್ಯಘಟನೆಯನ್ನು ಆಧರಿಸಿ 'ದಿ ವಾಕ್' ಸಿನಿಮಾವನ್ನು ತೆರೆಗೆ ತಂದಿದ್ದಾರೆ.
ಜೋಸೆಫ್ ಗಾರ್ಡನ್ ಇಲ್ಲಿ ಫಿಲಿಪ್ ಪೆತಿತ್ ಪಾತ್ರದಲ್ಲಿ ಮಿಂಚಿದ್ದಾರೆ. ಆತನ ಮಾರ್ಗದರ್ಶಕರಾಗಿ ಬೆನ್ ಕಿಂಗ್ಸ್‍ಲೇ ಕೂಡ ಗಮನ ಸೆಳೆಯುತ್ತಾರೆ. ಅದ್ಭುತವಾದ ಛಾಯಾಗ್ರಹಣ, ಓಡುತ್ತಲೇ ಇರುವ ಚಿತ್ರಕತೆ ಎರಡೂ ಕಾಲು ಗಂಟೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಚಿತ್ರದ ಮೊದಲರ್ಧ ಭಾಗ ಫಿಲಿಪ್ ಆರಂಭದ ಬದುಕನ್ನು ಚಿತ್ರಿಸುತ್ತದೆ. ಪ್ಯಾರಿಸ್‍ನಲ್ಲಿ ಹಗ್ಗದ ಮೇಲೆ ನಡೆಯುವ ಸಾಹಸಗಳನ್ನು ಮಾಡಿ ಸೋಲುವುದು, ಗೆಲ್ಲುವ ಹಟಕ್ಕಾಗಿ ಚರ್ಚ್ ಗೋಪುರಗಳ ನಡುವೆ ಹಗ್ಗ ಬಿಗಿದು ಯಶಸ್ವಿಯಾಗಿ ನಡೆಯುವುದು, ಅದಕ್ಕಾಗಿ ಪೊಲೀಸರಿಗೆ ಸೆರೆಯಾಗಿ ಸುದ್ದಿಯಾಗುತ್ತಾನೆ.
ಪೊಲೀಸರ ಅತಿಥಿಯಾದ ಪತ್ರಿಕೆಯಲ್ಲೇ ನ್ಯೂಯಾರ್ಕ್ ನಗರದಲ್ಲಿ ಜಗತ್ತಿನ ಅತಿ ಎತ್ತರದ ಅವಳಿ ಕಟ್ಟಡಗಳು ನಿರ್ಮಾಣವಾಗುತ್ತಿರುವ ಸುದ್ದಿ ಪ್ರಕಟವಾಗಿರುತ್ತದೆ. ಫಿಲಿಪ್ ಅಲ್ಲಿಗೆ ಹೋಗುವುದಕ್ಕೆ ಸಿದ್ಧತೆ ನಡೆಸುತ್ತಾನೆ. ಚಿತ್ರದ ದ್ವಿತೀಯಾರ್ಧವೇ ನಿಜವಾದ ಸಿನಿಮಾ. ಎರಡು ಕಟ್ಟಡಗಳ ನಡುವೆ ಕೇಬಲ್ ಬಿಗಿಯುವುದು, ಸಣ್ಣ ಪುಟ್ಟ ತೊಡಕುಗಳನ್ನು ಎದುರಿಸುತ್ತಲೇ ಯಾವುದೇ ಕಾರಣಕ್ಕೂ ನಿರ್ಧಾರವಾಗಿರುವ ಮಹತ್ವದ ನಡಿಗೆಯ ಯೋಜನೆಯಿಂದ ಸರಿಯದೇ ದೃಢವಾಗಿ ನಿಲ್ಲುವುದು. ಎರಡು ಕಟ್ಟಡಗಳ ನಡುವಿನ 60 ಮೀಟರ್ ಅಂತರದಲ್ಲಿ ಕೇಬಲ್ ವೈರ್ ಮೇಲೆ 8 ಬಾರಿ ನಡೆಯುವುದು ನೋಡುಗರಲ್ಲಿ ಮೈಝುಮ್ಮೆನ್ನಿಸುವ ಅನುಭವವನ್ನು ಕಟ್ಟಿಕೊಡುತ್ತದೆ.
ಒಂದು ಘಟನೆಯ ಸುತ್ತವೇ ಇಡೀ ಚಿತ್ರವಿರುವುದರಿಂದ ಎರಡೂ ಕಾಲುಗಂಟೆ ದೀರ್ಘವಾಯಿತು ಎನ್ನಿಸುತ್ತದೆ. ಆದರೆ 3ಡಿಯಲ್ಲಿ ಮೂಡಿ ಬರುವ ದೃಶ್ಯಗಳು ಮೈ ಮರೆಸುತ್ತವೆ. ಹಿನ್ನೆಲೆಯ ಸಂಗೀತದಲ್ಲಿ ನಿಶ್ಯಬ್ದಕ್ಕೂ ಹೆಚ್ಚಿನ ಪ್ರಾಶ್ಯಸ್ತ ನೀಡಿರುವುದು ಇಡೀ ಚಿತ್ರದ ಅನುಭವವನ್ನು ಪ್ರೇಕ್ಷಕ ನೇರ ಸಾಕ್ಷಿಯಾಗುವಂತೆ ಮಾಡುತ್ತದೆ. ಒಟ್ಟಾರೆ 'ದಿ ವಾಕ್' ಒಂದು ರೋಚಕ ನಡಿಗೆಯ ಅನುಭವವನ್ನು ಪ್ರೇಕ್ಷಕನಿಗೆ ಕಟ್ಟಿಕೊಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics