ಬಾಲಿವುಡ್

ನಾನು ವಿಮರ್ಶೆಗಳನ್ನು ಓದುವುದಿಲ್ಲ: ಜಾನ್ ಅಬ್ರಹಾಂ

Guruprasad Narayana

ನವದೆಹಲಿ: ಸಿನೆಮಾ ವಿಮರ್ಶಕರ ಪ್ರತಿಕ್ರಿಯೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವ ಬಾಲಿವುಡ್ ನಟ ಜಾನ್ ಅಬ್ರಹಾಂ, ನನ್ನ ಮನೆಗೆ ದಿನಪತ್ರಿಕೆಗಳು ಬರುವುದಿಲ್ಲ ಮತ್ತು ಸಿನೆಮಾಗಳ ಬಗ್ಗೆ ಅವುಗಳಲ್ಲಿ ಪ್ರಕಟವಾಗುವ ವಿಮರ್ಶೆಗಳನ್ನು ಓದುವುದಿಲ್ಲ ಎಂದಿದ್ದಾರೆ. ವಿಮರ್ಶೆಗಳಿಂದ ನೊಂದುಕೊಳ್ಳುವುದು ಮನುಷ್ಯನ ಸ್ವಭಾವ ಎಂದಿರುವ ಅವರು, ಸಿನೆಮಾಗೆ ಯಾರ ಪ್ರತಿಕ್ರಿಯೆ ಹೆಚ್ಚು ಮುಖ್ಯ ಎಂದು ತಿಳಿಯುವಷ್ಟು ಬೆಳೆದಿದ್ದೇನೆ ಎಂದಿದ್ದಾರೆ.

ಬಿಡುಗಡೆಯಾಗಬೇಕಿರುವ ತಮ್ಮ ಚಿತ್ರ 'ವೆಲ್ಕಂ ಬ್ಯಾಕ್' ಪ್ರಚಾರಕ್ಕಾಗಿ 'ಮದ್ರಾಸ್ ಕಫೆ' ನಟ ನವದೆಹಲಿಯಲ್ಲಿದ್ದರು. ೧೩ ವರ್ಷಗಳ ಹಿಂದೆಯೇ ದಿನಪತ್ರಿಕೆಗಳನ್ನು ನಿಲ್ಲಿಸಿದ್ದೇನೆ ಎಂದಿರುವ ಅವರು "ನಾನು ನನ್ನ ವೃತ್ತಿಜೀವನ ಪ್ರಾರಂಭಿಸಿದಾಗ... ನಾನು ಕೂಡ ಒಬ್ಬ ಮನುಷ್ಯ ಎಂಬುದು ನೀವು ತಿಳಿಯಬೇಕು... ನಾನು ವಿಮರ್ಶೆಗಳಿಗೆ ಪ್ರತಿಕ್ರಿಯಿಸುತ್ತಿದ್ದೆ, ಆದರೆ ನಮ್ಮ ಮನೆಗೆ ದಿನಪತ್ರಿಕೆಗಳು ಬಂದು ೧೩ ವರ್ಷಗಳು ಕಳೆದುಹೋಗಿವೆ. ಹಾಗಾಗಿ ಇದು ನನಗೆ ಕೆಲಸ ಮಾಡಿದೆ" ಎಂದು ವರದಿಗಾರರಿಗೆ ಜಾನ್ ಹೇಳಿದ್ದಾರೆ.

ಋಣಾತ್ಮಕ ವಿಮರ್ಶೆಗಳಿಗೆ ತಲೆಕೆಡಿಸಿಕೊಳ್ಳದೆ ಇರುವುದನ್ನು ನಾನು ಕಳೆದ ಕೆಲವು ವರ್ಷಗಳಿಂದ ಕಲಿತಿದ್ದೇನೆ ಎನ್ನುತ್ತಾರೆ. "ನನ್ನ ಸಿನೆಮಾ ಹೇಗಿದೆ ಎಂದು ತಿಳಿಯಲು ವಿಮರ್ಶೆಗಳ ಅಗತ್ಯ ಇಲ್ಲ. 'ಮದ್ರಾಸ್ ಕಫೆ' ಸಿನೆಮಾಗಾಗಿ ನನ್ನ ಜೊತೆಗಾರರು ಅಭಿನಂದಿಸಿದಾಗ ಹಾಗೂ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಾಗ ಅದು ಸಾಕು.. ಆದುದರಿಂದ ವಿಮರ್ಶೆಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ" ಎಂದು ನಟ-ನಿರ್ಮಾಪಕ ತಿಳಿಸಿದ್ದಾರೆ.

ಆದರೂ ವಿಮರ್ಶಕರ ಬಗ್ಗೆ ಅಗೌರವ ತೋರುವುದಿಲ್ಲ ಎಂದಿರುವ ಅವರು, ಸಿನೆಮಾ ತಯಾರಿಕೆಗೆ ಕಷ್ಟ ಪಡುತ್ತೇವೆ ಎಂಬುದನ್ನು ವಿಮರ್ಶಕರು ತಿಳಿಯಬೇಕು ಎಂದಿದ್ದಾರೆ.

'ವೆಲ್ಕಂ ಬ್ಯಾಕ್' ಬಗ್ಗೆ ಮಾತನಾಡಿದ ಅವರು "ನಿಮ್ಮನ್ನು ನಗಿಸಲು ನಾವು ಎಷ್ಟು ಕಷ್ಟ ಪಡುತ್ತೀವಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.. ಹಾಸ್ಯ ನಮಗೆ ಗಂಭೀರ ವ್ಯವಹಾರ. ದಯವಿಟ್ಟು ಅದನ್ನು ಗೌರವಿಸಿ" ಎಂದಿದ್ದಾರೆ.

೨೦೦೭ರಲ್ಲಿ ವೆಲ್ಕಂ ಸಿನೆಮಾ ಬಿಡುಗಡೆಯಾದಾಗಲು ವಿಮರ್ಶೆಗಳು ಧನಾತ್ಮಕವಾಗಿರಲಿಲ್ಲ. ಆದರೆ ಕಳೆದ ಒಂದು ದಶಕದ ಅತಿ ಒಳ್ಳೆಯ ಹಾಸ್ಯ ಸಿನೆಮಾವಾಗಿ ಇಂದಿಗೂ ಮುಂದುವರೆದಿದೆ ಎಂದಿದ್ದಾರೆ ಜಾನ್.

ಅನಿಲ್ ಕಪೂರ್, ನಾಸಿರುದ್ದೀನ್ ಷಾ, ಪರೇಶ್ ರಾವಲ್, ನಾನಾ ಪಾಟೇಕರ್, ಡಿಂಪಲ್ ಕಪಾಡಿಯಾ, ಶೃತಿ ಹಾಸನ್, ಶೈನಿ ಅಹುಜಾ ಮತ್ತು ಜಾನ್ ಅಭಿನಯದ ಸಿನೆಮಾ ಶುಕ್ರವಾರ ಬಿಡುಗಡೆಯಾಗಲಿದೆ. ಅನೀಸ್ ಬಾಜ್ಮಿ ಸಿನೆಮಾದ ನಿರ್ದೇಶಕರು.

SCROLL FOR NEXT