ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಮೇಲೆ ತಮ್ಮ ಪ್ರದರ್ಶನದಲ್ಲಿ ಬದಲಾವಣೆಯಾಗಿದ್ದಲ್ಲದೆ, ವೈಯಕ್ತಿಕವಾಗಿ ಸಮಾಜವನ್ನು ಇನ್ನಷ್ಟು ಪ್ರೀತಿಯಿಂದ ನೋಡಲು ಸಾಧ್ಯವಾಯಿತು ಎಂದು ನಂಬುತ್ತಾರೆ, 'ದಂಗಾಲ್' ಸಿನೆಮಾದಲ್ಲಿ ನಟಿಸಿರುವ ಯುವ ನಟಿಯರಾದ ಫಾತಿಮಾ ಸನಾ ಶೇಕ್ ಮತ್ತು ಸಾನ್ಯಾ ಮಲಹೋತ್ರ.
"ರಾಜಕಾರಾಣ, ಸಾಮಾಜಿಕ ಸಂಗತಿಗಳು ಅಥವಾ ದೇಶದ ದಿನನಿತ್ಯದ ವ್ಯವಹಾರಗಳ ಬಗ್ಗೆ ಆಸಕ್ತಿ ಹೊಂದುವ ವ್ಯಕ್ತಿ ನಾನಾಗಿರಲಿಲ್ಲ. ಅಮೀರ್ ಖಾನ್ ಅವರೊಂದಿಗೆ 'ದಂಗಾಲ್' ಸಿನೆಮಾದಲ್ಲಿ ಕಳೆದ ಎರಡು ವರ್ಷಗಳಿಂದ ಕೇವಲ ಸಹನಟಿಯಾಗಿ ಕೆಲಸ ಮಾಡಿದ್ದಷ್ಟೇ ಅಲ್ಲದೆ, ಸಮಾಜದೆಡೆಗೆ ಅವರ ಅನುಕಂಪ ನನ್ನನ್ನು ಬಹಳ ಪ್ರಭಾವಿಸಿದೆ" ಎನ್ನುತ್ತಾರೆ ಸಿನೆಮಾದಲ್ಲಿ ಕುಸ್ತಿಪಟು ಗೀತಾ ಫೋಗಟ್ ಪಾತ್ರ ನಿರ್ವಹಿಸಿರುವ ನಟಿ ಫಾತಿಮಾ.
"ನಮ್ಮ ದೇಶದಲ್ಲಿ ನೀರಿನ ಸ್ಥಿತಿ, ರೈತರು ಹೇಗೆ ಕಷ್ಟ ಪಡುತ್ತಾರೆ ಇವುಗಳ ಬಗ್ಗೆ ನನಗೀಗ ಸಾಕಷ್ಟು ತಿಳಿದಿದೆ... ಈ ರೀತಿಯಲ್ಲಿ ಸಮಾಜದೆಡೆಗೆ ನಮ್ಮ ಗ್ರಹಿಕೆ ಬದಲಾಗಿದೆ" ಎನ್ನುತ್ತಾರೆ.
ಇದನ್ನು ಅನುಮೋದಿಸುವ ಕುಸ್ತಿಪಟು ಬಬಿತಾ ಕುಮಾರಿ ಪಾತ್ರ ನಿರ್ವಹಿಸಿರುವ ನಟಿ ಸಾನ್ಯಾ "ಅದು ನಿಜ. ಅಮೀರ್ ಅವರನ್ನು ಗಮನಿಸುತ್ತಾ, ಸಾಮಾಜಿಕ ಸಂಗತಿಗಳ ಬಗ್ಗೆ ಅವರ ಚಿಂತನೆಗಳನ್ನು ಮತ್ತು ಅಭಿಪ್ರಾಯಗಳನ್ನು ತಿಳಿಯುತ್ತ, ನಮ್ಮನ್ನು ಬಹಳ ಪ್ರಭಾವಿಸಿದವು. ಇದು ನಮ್ಮಿಬ್ಬರನ್ನು ಉತ್ತಮ ವ್ಯಕ್ತಿಗಳನ್ನಾಗಿಸುವತ್ತ ಸಹಾಯ ಮಾಡಿವೆ" ಎನ್ನುತ್ತಾರೆ.
ಬಹುನಿರೀಕ್ಷಿತ ಈ ಬಾಲಿವುಡ್ ಚಿತ್ರ ಡಿಸೆಂಬರ್ ೨೩ ಕ್ಕೆ ತೆರೆಕಾಣಲಿದೆ.