ಮುಂಬೈ: 'ಮುನ್ನಾಭಾಯಿ' ಸಿನೆಮಾಗಳ ನಟ ಮತ್ತು ಗೆಳೆಯ ಸಂಜಯ್ ದತ್ ಸೆರೆಮನೆಯಿಂದ ಬಿಡುಗಡೆಗೆಯಾಗಲಿರುವ ಸುದ್ದಿಗೆ ಹರ್ಷ ವ್ಯಕ್ತಪಡಿಸಿರುವ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳನ್ನು ಸಿದ್ಧಪಡಿಸಿರುವುದಾಗಿ ತಿಳಿಸಿದ್ದಾರೆ.
೧೯೯೩ರ ಮುಂಬೈ ಸರಣಿ ಸ್ಫೋಟದ ಸಮಯದಲ್ಲಿ ಅನಧಿಕೃತವಾಗಿ ಎ ಕೆ-೪೭ ಹೊಂದಿದ್ದಕ್ಕೆ ೫೬ ವರ್ಷದ ನಟನಿಗೆ ಜೈಲು ಶಿಕ್ಷೆ ನೀಡಲಾಗಿತ್ತು.
ಫೆಬ್ರವರಿ ೨೭ ರಂದು ಸಂಜಯ್ ಜೈಲಿನಿಂದ ಹೊರಬರಲಿದ್ದಾರೆ ಎಂದು ಅವರ ವಕೀಲ ಹಿತೇಶ್ ಜೈನ್ ತಿಳಿಸಿದ್ದರು, "ಈ ವಿಷಯದಲ್ಲಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ" ಎಂದು ಮಹಾರಾಷ್ಟ್ರದ ರಾಜ್ಯ ಗೃಹ ಸಚಿವ ಹೇಳಿದ್ದಾರೆ.
"ಅವರು ಸೆರೆಮನೆಯಿಂದ ಹಿಂದಿರುಗುವುದಕ್ಕೆ ನಮಗೆ ಸಂತಸವಾಗಿದೆ. ಅವರು ತಪ್ಪು ಮಾಡಿ ಶಿಕ್ಷೆ ಅನುಭವಿಸಿದ್ದಾರೆ. ಇದು ಅವರಿಗೆ ಹೊಸಹುಟ್ಟು" ಎಂದು 'ವಾಜಿರ್' ಸಿನೆಮಾದ ವಿಶೇಷ ಪ್ರದರ್ಶನದ ವೇಳೆ ವಿಧು ವಿನೋದ್ ಚೋಪ್ರಾ ಹೇಳಿದ್ದಾರೆ.
"ಕಳೆದ ೨ ವರ್ಷಗಳಿಂದ ಅವರಿಗಾಗಿ ಸ್ಕ್ರಿಪ್ಟ್ ಗಳನ್ನು ಬರೆಯುತ್ತಲೇ ಇದ್ದೇವೆ. ಈಗ ಅವರಿಗಾಗಿ ಹಲವಾರು ಸ್ಕ್ರಿಪ್ಟ್ ಗಳಿವೆ" ಎಂದು ಕೂಡ ಚೋಪ್ರಾ ಹೇಳಿದ್ದಾರೆ.
ಮುನ್ನಾಭಾಯಿ ಸರಣಿಯ ಮೂರನೆ ಚಿತ್ರ 'ಮುನ್ನಾಭಾಯಿ ಆನ್ ದ ಫ್ಲೈಟ್' ಚಿತ್ರಕ್ಕೂ ಸ್ಕ್ರಿಪ್ಟ್ ಸಿದ್ಧವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.