ನವದೆಹಲಿ: ಪಾಕಿಸ್ತಾನದ ನಟ ಫಾವದ್ ಖಾನ್ ನಟಿಸಿರುವ ಏ ದಿಲ್ ಹೇ ಮುಷ್ಕಿಲ್ ಚಿತ್ರದ ನಿರ್ದೇಶಕ ಕರಣ್ ಜೋಹರ್ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ನಟರನ್ನು ಬಹಿಷ್ಕರಿಸುವುದು ಭಯೋತ್ಪಾದನೆಗೆ ಇರುವ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉರಿ ಸೆಕ್ಟರ್ ನಲ್ಲಿರುವ ಸೇನಾ ಕಚೇರಿ ಮೇಲೆ ಪಾಕಿಸ್ತಾನದ ಭಯೋತ್ಪಾದಕರು ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಪಾಕಿಸ್ತಾನ ಕಲಾವಿದರಿಗೆ 48 ಗಂಟೆಯೊಳಗೆ ಭಾರತ ಬಿಟ್ಟು ತೆರಳಿವಂತೆ ಹೇಳಿತ್ತು. ಒಂದು ವೇಳೆ ದೇಶ ಬಿಟ್ಟು ಹೋಗದೆ ಇದ್ದರೆ ಹೊರದೂಡುವುದಾಗಿ ಎಂಎನ್ಎಸ್ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕರಣ್ ಜೋಹರ್, ಪಾಕಿಸ್ತಾನ ಕಲಾವಿದರನ್ನು ಬಹಿಷ್ಕರಿಸುವುದು ಭಯೋತ್ಪಾದನೆಗೆ ಇರುವ ಪರಿಹಾರವಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದಕ ದಾಳಿ ವಿರುದ್ಧ ವ್ಯಕ್ತವಾಗುತ್ತಿರುವ ಆಕ್ರೋಶ ಅರ್ಥವಾಗುತ್ತದೆ. ಯೋಧರ ಸಾವಿಗೆ ನನ್ನ ಹೃದಯ ಮಿಡೀಯುತ್ತದೆ. ಭಯೋತ್ಪಾದಕ ಕೃತ್ಯಗಳನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಲಾಗುವುದಿಲ್ಲ. ಆದರೆ ಪಾಕಿಸ್ತಾನಿ ಕಲಾವಿದರನ್ನು ಬಹಿಷ್ಕರಿಸುವುದು, ನಿಷೇಧಿಸುವುದು ಸಮಸ್ಯೆಗೆ ಪರಿಹಾರವಲ್ಲ. ಒಂದು ವೇಳೆ ಅದೇ ಪರಿಹಾರವಾಗಿದ್ದಿದ್ದರೆ ಖಂಡಿತಾ ಈ ವರೆಗೆ ಯಾರಾದರೂ ಅದನ್ನು ಮಾಡಿರುತ್ತಿದ್ದರು ಎಂದು ಕರಣ್ ಜೋಹರ್ ತಿಳಿಸಿದ್ದಾರೆ. ಭಯೋತ್ಪಾದನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೇರೆ ಮಾರ್ಗಗಳಿವೆ, ಕಲೆಯನ್ನು ಬಹಿಷ್ಕರಿಸುವುದು ಮಾರ್ಗವಲ್ಲ ಎಂದಿದ್ದಾರೆ ಕರಣ್ ಜೋಹರ್.
ಈ ಸಂದರ್ಭದಲ್ಲಿ ಕಲಾವಿದರು ಸಣ್ಣ ಮಿನುಗಳಿದ್ದಂತೆ:
ಇನ್ನು ಬಾಲಿವುಡ್ ನಟಿ ರೀಚಾ ಚಡ್ಡಾ ಸಹ ಎಂಎನ್ಎಸ್ ಗಡುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಮಸ್ಯೆಗೆ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪಾಕಿಸ್ತಾನಿ ಕಲಾವಿದರನ್ನು ಬಹಿಷ್ಕರಿಸುವುದು ಅಥವಾ ಪಾಕಿಸ್ತಾನದ ಜಿಂದಗಿ ಚಾನಲ್ ನ್ನು ನಿಷೇಧಿಸುವುದೊಂದೇ ಭಯೋತ್ಪಾದನೆ ತಡೆಗೆ ಸೂಕ್ತ ಪರಿಹಾರ ಎಂಬುದೇ ಆದರೆ ಹಾಗೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲ್ಲಿ, ನಮ್ಮ ಪ್ರಧಾನಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ರೀಚಾ ಚಡ್ಡಾ ಹೇಳಿದ್ದಾರೆ. ನಟ ವೀರ್ ದಾಸ್ ಸಹ ಇದೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ಪರಿಸ್ಥಿತಿಗಳಲ್ಲಿ( ಭಯೋತ್ಪಾದನೆ ವಿಚಾರದಲ್ಲಿ) ಕಲಾವಿದರು ಸಣ್ಣ ಮಿನುಗಳಿದ್ದಂತೆ ಅವರನ್ನು ನಿಷೇಧಿಸುವುದರಿಂದ, ಬಹಿಷ್ಕರಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದಿದ್ದಾರೆ.