ಬಾಲಿವುಡ್

ಪಾಕಿಸ್ತಾನದಲ್ಲಿ ಟ್ಯೂಬ್ ಲೈಟ್ ಬಿಡುಗಡೆ?

Srinivas Rao BV
ಬಿಡುಗಡೆಗೆ ಸಿದ್ಧವಾಗಿರುವ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ಟ್ಯೂಬ್ ಲೈಟ್ ಪಾಕಿಸ್ತಾನದಲ್ಲೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರ ನಿರ್ಮಾಪಕರು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್ ನ ಸಿಒಒ ಹಾಗೂ ಸಹ ನಿರ್ಮಾಪಕರಾಗಿರುವ ಅಮರ್ ಭೂತಾಲಾ ಈ ಬಗ್ಗೆ ಹೇಳಿಕೆ ನೀಡಿದ್ದು, ಸಲ್ಮಾನ್ ಖಾನ್ ಫಿಲ್ಮ್ಸ್ ಯಶ್ ರಾಜ್ ಫಿಲ್ಮ್ಸ್ ಮೂಲಕ ’ಟ್ಯೂಬ್ ಲೈಟ್’ ಸಿನಿಮಾವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವುದಕ್ಕೂ ಸಿದ್ಧವಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಸಲ್ಮಾನ್ ಖಾನ್ ಗೆ ಅಪಾರ ಅಭಿಮಾನಿಗಳಿದ್ದು, ಭಜರಂಗಿ ಭಾಯಿಜಾನ್ ಚಿತ್ರ ಬಿಡುಗಡೆಯ ನಂತರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಟ್ಯೂಬ್ ಲೈಟ್ ಸಿನಿಮಾ ಬಿಡುಗಡೆಗೆ ಸಿದ್ಧವಿದ್ದೇವೆ, ಇದೇ ವೇಳೆ ನೆಲದ ಕಾನೂನನ್ನೂ ಗೌರವಿಸುತ್ತೇವೆ ಎಂದು ಅಮರ್ ಭೂತಾಲಾ ತಿಳಿಸಿದ್ದಾರೆ. 
ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ ನಡೆದ ನಂತರ ಪಾಕ್ ಕಲಾವಿದರಿಗೆ ಇಲ್ಲಿನ ಚಿತ್ರಗಳಲ್ಲಿ ನಟಿಸದಂತೆ ನಿಷೇಧಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಚಿತ್ರಗಳನ್ನು ಪಾಕಿಸ್ತಾನ ನಿಷೇಧಿಸಿತ್ತು. ಆದರೆ ವರ್ಷಾರಂಭದಲ್ಲಿ ಪಾಕಿಸ್ತಾನ ಭಾರತೀಯ ಚಿತ್ರಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದು, ಟ್ಯೂಬ್ ಲೈಟ್ ಸಿನಿಮಾ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಐಎಸ್ಐ ಏಜೆಂಟ್ ನ ಕಥಾಹಂದರ ಹೊಂದಿದ್ದ ಸಲ್ಮಾನ್ ಖಾನ್ ಹಾಗೂ ಕತ್ರಿಕಾ ಕೈಫ್ ಚಿತ್ರವನ್ನು ಪಾಕಿಸ್ತಾನ ನಿಷೇಧಿಸಿತ್ತು. 
ಟ್ಯುಬ್ ಲೈಟ್ ಚಿತ್ರ 1962 ರಲ್ಲಿ ನಡೆದ ಭಾರತ-ಚೀನಾ ಯುದ್ಧಕ್ಕೆ  ಸಂಬಂಧಿಸಿದ ಕಥೆ ಹೊಂದಿರುವ ಸಿನಿಮಾ ಆಗಿದೆ. 
SCROLL FOR NEXT