ಮುಂಬೈ: ವಿವಾದಾತ್ಮಕ ನಟ ಸಂಜಯ್ ದತ್ ಅವರ ಜೀವನವನ್ನು ತೆರೆಯ ಮೇಲೆ ನಿರ್ವಹಿಸುತ್ತಿರುವ ರಣಬೀರ್ ಕಪೂರ್ ಅವರನ್ನು ನೋಡಿ ವೀಕ್ಷಕರಿಗೆ ಆಚ್ಚರಿಯಾಗಲಿದೆ ಎಂದಿದ್ದಾರೆ ರಾಜಕುಮಾರ್ ಹಿರಾನಿ ನಿರ್ದೇಶನದ ಈ ಬಯೋಪಿಕ್ ನಲ್ಲಿ ಪಾತ್ರ ಪಡೆದಿರುವ ನಟ ವಿಕ್ಕಿ ಕೌಶಲ್.
"ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಕಪೂರ್ ಅವರನ್ನು ಕಂಡಾಗ ಪ್ರೇಕ್ಷಕರಿಗೆ ತೀವ್ರ ಅಚ್ಚರಿಯಾಗಲಿದೆ. ಅವರು ಈ ಪಾತ್ರಕ್ಕಾಗಿ ಹೆಚ್ಚಿನ ಶ್ರಮವಹಿಸಿದ್ದಾರೆ ಮತ್ತು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ" ಎಂದು ಬುಧವಾರ 'ನಾಮ್ ಶಬನಾ' ಸಿನೆಮಾದ ಪ್ರದರ್ಶನದ ವೇಳೆ ವಿಕ್ಕಿ ಹೇಳಿದ್ದಾರೆ.
ಈ ಬಯೋಪಿಕ್ ನಲ್ಲಿ ನಟಿಸಲು ಅತೀವ ಸಂತಸವಾಗಿರುವುದಾಗಿ ತಿಳಿಸಿರುವ 'ಮಸಾನ್' ನಟ, ಇಂತಹ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದು ನನ್ನ ಕನಸಾಗಿತ್ತು ಎಂದಿದ್ದಾರೆ.
"ಸಂಜಯ್ ದತ್ ಬಯೋಪಿಕ್ ನಲ್ಲಿ ನಟಿಸುವ ಮೂಲಕ ನನ್ನ ಕನಸು ನನಸಾಗಿದೆ. ನನ್ನ ವೈಯಕ್ತಿಕ ಜೀವನದಲ್ಲಿ ನಾನು ರಾಜಕುಮಾರ್ ಹಿರಾನಿ, ಅಭಿಜಾತ್ ಜೋಶಿ (ಬರಹಗಾರ), ರಣಬೀರ್ ಕಪೂರ್ ಮತ್ತು ವಿಧು ವಿನೋದ್ ಚೋಪ್ರಾ ಅವರ ಅಭಿಮಾನಿಯಾಗಿದ್ದೆ ಮತ್ತು ಕೆಲವೊಮ್ಮೆ ನಾನು ಕನಸಿನಲ್ಲಿರುವಂತೆ ಭಾಸವಾಗುತ್ತದೆ ಮತ್ತು ಈ ಚಿತ್ರೀಕರಣದಿಂದ ಸಾಕಷ್ಟು ಕಲಿಯಲು ಸಿಗುತ್ತಿದೆ" ಎಂದಿದ್ದಾರೆ ವಿಕ್ಕಿ.
"ನನ್ನ ವೃತ್ತಿಜೀವನದ ಪ್ರಾರಂಭದಲ್ಲಿಯೇ ಇಂತಹ ಖ್ಯಾತನಾಮರ ಜೊತೆಗೆ ಕೆಲಸ ಮಾಡುತ್ತೇನೆ ಎಂದೆಣಿಸಿರಲಿಲ್ಲ" ಎಂದಿದ್ದಾರೆ ವಿಕ್ಕಿ.
ಸಿನೆಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ವಿಕ್ಕಿ "ನಾನು ಸಂಜಯ್ ದತ್ ಅವರ ನಿಕಟ ಗೆಳೆಯನ ಪಾತ್ರದಲ್ಲಿ ನಟಿಸಿದ್ದೇನೆ. ನಟನ ಜೀವನದ ಪಯಣದಲ್ಲಿ ಈ ಗೆಳೆಯ ಅವರೊಟ್ಟಿಗೆ ಸದಾ ನಿಕಟವಾಗಿರುತ್ತಾನೆ" ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos