ಮುಂಬೈ: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತಿ ಚಿತ್ರದ ಬೆಂಬಲಕ್ಕೆ ನಿಂತಿರುವ ಭಾರತೀಯ ಚಿತ್ರೋದ್ಯಮದ ನೂರಾರು ಚಿತ್ರ ನಿರ್ಮಾಪಕರು ಹಾಗೂ ಕಾರ್ಮಿಕರು ಭಾನುವಾರ 15 ನಿಮಿಷಗಳ ಕಾಲ ಚಿತ್ರೀಕರಣ ಸ್ಥಗಿತಗೊಳಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ.
ಭಾರತೀಯ ಚಿತ್ರ ಮತ್ತು ಟಿವಿ ನಿರ್ದೇಶಕರ ಸಂಘ(ಐಎಪ್ ಟಿಡಿಎ) ಸೇರಿದಂತೆ ದೇಶಾದ್ಯಂತ ಒಟ್ಟು 19 ಚಿತ್ರೋದ್ಯಮ ಸಂಘಟನೆಗಳು, ಕ್ರಿಯಾತ್ಮಕ ವಲಯದಲ್ಲಿರುವ ನಿರ್ದೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗಾಗಿ 15 ನಿಮಿಷಗಳ ಕಾಲ ಚಿತ್ರೀಕರಣ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಮುಂಬೈನ ಫಿಲ್ಮ್ ಸಿಟಿಯಲ್ಲಿ ನನಗೆ ಸ್ವಾತಂತ್ರ್ಯ ಇದೆಯೇ? ಎಂಬ ಘೋಷಣೆಯಡಿ ಭಾರತೀಯ ಚಿತ್ರೋದ್ಯಮ ಪ್ರತಿಭಟನೆ ನಡೆಸುತ್ತಿದ್ದು, ಇದರಲ್ಲಿ ಸುಮಾರು 600-700 ಚಿತ್ರ ನಿರ್ಮಾಪಕರು, ಬರಹಗಾರರು, ಕಾರ್ಮಿಕರು ಭಾಗವಹಿಸುವ ಮೂಲಕ 'ಪದ್ಮಾವತಿ'ಯನ್ನು ಬೆಂಬಲಿಸಲಿದ್ದಾರೆ.
ನಾಳೆ ಸಂಜೆ 4.15ರಿಂದ 4.30ರ ವರೆಗೆ ದೇಶಾದ್ಯಂತ ಚಿತ್ರೀಕರಣವನ್ನು ಬಂದ್ ಮಾಡಲಾಗುತ್ತಿದೆ. ಈ ಪ್ರತಿಭಟನೆ ಮೂಲಕ ನಾವು ಸ್ವತಂತ್ರರೇ? ನಾವು ಪ್ರಜಾಪ್ರಭುತ್ವ ದೇಶದಲ್ಲಿ ಬದುಕುತ್ತಿದ್ದೇವೆಯೇ? ಎಂದು ಪ್ರಶ್ಮಿಸಲಾಗುವುದು ಎಂದು ಐಎಫ್ ಟಿಡಿಎ ಸಂಚಾಲಕ ಅಶೋಕ್ ಪಂಡಿತ್ ಅವರು ಹೇಳಿದ್ದಾರೆ.
ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದಲ್ಲಿ ಇತಿಹಾಸ ತಿರುಚಲಾಗಿದೆ ಮತ್ತು ರಾಣಿ ಪದ್ಮಾವತಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಜಪೂತ್ ಸಂಘಟನೆಗಳು ಹಾಗೂ ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಚಿತ್ರ ಬಿಡುಗಡೆಗೂ ಮುನ್ನ ಹಲವು ರಾಜ್ಯಗಳಲ್ಲಿ ನಿಷೇಧ ಹೇರಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos