ಬಾಲಿವುಡ್

ದೆಹಲಿ: ಪ್ರಿಯಾಂಕಾ-ನಿಖ್ ಆರತಕ್ಷತೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ

Sumana Upadhyaya

ನವದೆಹಲಿ: ಕಳೆದ ರಾತ್ರಿ ದೆಹಲಿಯಲ್ಲಿ ನಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕಾದ ಗಾಯಕ ನಿಖ್ ಜೊನಸ್ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ. 2000ನೇ ಇಸವಿಯಲ್ಲಿ ಮಿಸ್ ವರ್ಲ್ಡ್ ಕಿರೀಟವನ್ನು ಕೂಡ ತೊಟ್ಟಿದ್ದರು. ಹೀಗಾಗಿ ಪ್ರಧಾನಿಯವರು ಕಾರ್ಯಕ್ರಮಕ್ಕೆ ಆಗಮಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಬಿಳಿ ಕುರ್ತಾ-ಪೈಜಾಮಾ, ಕಪ್ಪು ಬಣ್ಣದ ನೆಹರೂ ಜಾಕೆಟ್ ಎಂದೇ ಜನಪ್ರಿಯವಾಗಿರುವ ಜಾಕೆಟ್ ಧರಿಸಿ ತೀವ್ರ ಭದ್ರತೆ ನಡುವೆ ಆಗಮಿಸಿದ ಪ್ರಧಾನಿ ವೇದಿಕೆ ಬಳಿ ಆಗಮಿಸಿ ನವ ಜೋಡಿಗಳಿಗೆ ವಂದಿಸುತ್ತಾ ನಗುತ್ತಾ ಕ್ಯಾಮರಾಗಳಿಗೆ ಫೋಸ್ ಕೊಟ್ಟರು. ಪ್ರಿಯಾಂಕಾ ಮತ್ತು ನಿಖ್ ಜೊನಸ್ ಕುಟುಂಬದವರ ಜೊತೆ ಸುಮಾರು 10 ನಿಮಿಷಗಳ ಕಾಲ ವೇದಿಕೆ ಮೇಲೆ ನಿಂತು ಮಾತನಾಡಿದರು.

ಪ್ರಿಯಾಂಕಾ ತನ್ನ ಪತಿಯ ಸೋದರ ಹಾಗೂ ಅವರ ಭಾವಿ ಪತ್ನಿಯನ್ನು ಮೋದಿಯವರಿಗೆ ಪರಿಚಯ ಮಾಡಿ, ಇವರಿಬ್ಬರ ವಿವಾಹ ಕೂಡ ನೆರವೇರಲಿದೆ ಎಂದು ಹೇಳಿದರು.
ಅದ್ದೂರಿ ಬಿಳಿ ಬಣ್ಣದ ಹಲವು ಪದರದ ವಜ್ರದ ನೆಕ್ಲೇಸ್ ಮತ್ತು ಕಿವಿಯ ಓಲೆ, ಬೆಳ್ಳಿ ಮಿಶ್ರಿತ ಬಿಳಿ ಬಣ್ಣದ ಲೆಹಂಗಾ ತೊಟ್ಟು, ಕೂದಲನ್ನು ಕಟ್ಟಿ ಬಿಳಿ ಬಣ್ಣದ ಗುಲಾಬಿಯಲ್ಲಿ ಪ್ರಿಯಾಂಕಾ ಮಿಂಚಿದರೆ ಪಂಜಾಬಿ ಸಂಪ್ರದಾಯದಂತೆ ಕೈತುಂಬಾ ಕೆಂಪು ಬಣ್ಣದ ಬಳೆ ಧರಿಸಿದ್ದರು. ನಿಖ್ ಕಡು ನೇರಳೆ ಬಣ್ಣದ ಜಾಕೆಟ್ ಮತ್ತು ಟೈ ಧರಿಸಿದ್ದರು. ದೆಹಲಿಯ ತಾಜ್ ಪ್ಯಾಲೆಸ್ ಹೊಟೇಲ್ ನ ದರ್ಬಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ಮಧ್ಯೆ ಎನ್ ಪಿ ಎಂದು ಬರೆದಿದ್ದು ಸೊಗಸಾಗಿತ್ತು.
ಸಭಾಂಗಣದ ಅಲ್ಲಲ್ಲಿ ಕ್ಯಾಂಡಲ್ ನ್ನು ಹೊತ್ತಿಸಲಾಗಿತ್ತು. ಈ ಮಧ್ಯೆ ಲೈವ್ ಮ್ಯೂಸಿಕ್ ಶಬ್ದ, ಕಾಕ್ ಟೇಲ್ ಮತ್ತು ಹಲವು ವೈವಿಧ್ಯ ತಿಂಡಿಗಳಿದ್ದವು. ವಿಂಟೇಜ್ ಕಾರನ್ನು ಕೂಡ ಹೊರಗೆ ಇಡಲಾಗಿತ್ತು. ಅದರಲ್ಲಿ ಜಸ್ಟ್ ಮ್ಯಾರೀಡ್ ಎಂದು ಬರೆಯಲಾಗಿತ್ತು.




SCROLL FOR NEXT