ನವದೆಹಲಿ: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ಬಿಡುಗಡೆಗೆ ಇದ್ದ ವಿಘ್ನಗಳೆಲ್ಲಾ ನಿವಾರಣೆಯಾಗಿದ್ದು ಇದೇ ಜನವರಿ 25ರಂದು ದೇಶಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿದೆ.
ಪದ್ಮಾವತ್ ಚಿತ್ರಕ್ಕೆ ಮರು ನಿಷೇಧ ಹೇರುವಂತೆ ಕೋರಿ ರಾಜಸ್ತಾನ, ಮಧ್ಯ ಪ್ರದೇಶ ಸರ್ಕಾರ ಹಾಗೂ ಕರ್ಣಿ ಸೇನೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು ಆ ಮೂಲಕ ಚಿತ್ರ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಚಿತ್ರದ ವಿರುದ್ಧ ಪ್ರತಿಭಟನೆಗಳು ಹಾಗೂ ಹಿಂಸೆಗಳು ನಡೆದರೆ ಅವುಗಳಿಗಾಗಿ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ. ಚಿತ್ರ ಪ್ರದರ್ಶನವನ್ನು ನಿಷೇಧಿಸಿ ಅರಾಜಕತೆ ಸೃಷ್ಟಿಸುವ ಶಕ್ತಿಗಳನ್ನು ಉತ್ತೇಜಿಸಲು ಸಾಧ್ಯವಿಲ್ಲ. ಸೆನ್ಸಾರ್ ಬೋರ್ಡ್ ತನ್ನ ಕೆಲಸವನ್ನು ಸರಿಯಾಗಿ ಮಾಡಿದೆ. ಇನ್ನು ಕಾನೂನು ಸುವ್ಯವಸ್ಥೆ ಕಾಪಾಡುವುದು ಅಯಾ ರಾಜ್ಯದ ಸರ್ಕಾರಗಳ ಕೆಲಸ. ಸರ್ಕಾರಗಳು ಸೂಕ್ತ ಭದ್ರತೆ ವಹಿಸುವಂತೆ ಹಾಗೂ ಕೋರ್ಟ್ ಆದೇಶವನ್ನು ಪಾಲಿಸುವಂತೆ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನಟಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರಕ್ಕೆ ವಿರೋಧ ಮುಂದುವರೆದಿರುವಂತೆಯೇ ಇತ್ತ ರಾಜಸ್ತಾನ ಮತ್ತು ಮಧ್ಯ ಪ್ರದೇಶ ಸರ್ಕಾರಗಳು ಚಿತ್ರದ ಮೇಲೆ ಹೇರಲಾಗಿದ್ದ ನಿಷೇಧವನ್ನು ಮರು ಹೇರಿಕೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದವು.
ಇಂದು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಎಂ ಖಾನ್ವಿಲ್ಕತರ್ ನೇತೃತ್ವದ ತ್ರಿಸದಸ್ಯ ಪೀಠ ಚಿತ್ರ ಬಿಡುಗಡೆಗೆ ಆದೇಶಿಸಿದೆ.
ಇನ್ನು ಹರಿಯಾಣದಲ್ಲೂ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದ್ದು, ಕುರುಕ್ಷೇತ್ರದಲ್ಲಿ ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ಮಾಲ್ ಮೇಲೆ ಸಂಘಟನೆಗಳ ಕಾರ್ಯಕರ್ತರು ದಾಳಿ ಮಾಡಿದ್ದರು. ಚಿತ್ರದ ಪೋಸ್ಟರ್ ಹರಿದು, ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಚಿತ್ರ ಪ್ರದರ್ಶನಕ್ಕೆ ಅವಕಾಶವಿದೆ. ಯಾವುದೇ ಚಿತ್ರ ಮಂದಿರ ಮಾಲೀಕರು ಚಿತ್ರ ಪ್ರದರ್ಶನಕ್ಕೆ ಭದ್ರತೆ ಕೋರಿದರೆ ಖಂಡಿತಾ ಸರ್ಕಾರ ಭದ್ರತೆ ಒದಗಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos