ಬಾಲಿವುಡ್

ಪಾಂಡ್ಯ, ರಾಹುಲ್ ಅಮಾನತು ನಂತರ ಹಲವು ರಾತ್ರಿ ನಿದ್ದೆಯೇ ಬಂದಿಲ್ಲ: ಕರಣ್ ಜೋಹರ್

Lingaraj Badiger
ನವದೆಹಲಿ: ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರ ಅಸಭ್ಯ ಹೇಳಿಕೆಗೆ ಸಂಬಂಧಿಸಿದಂತೆ ಕೊನೆಗೂ ಮೌನ ಮುರಿದಿರುವ ನಿರ್ಮಾಪಕ ಹಾಗೂ ಜನಪ್ರಿಯ ಖಾಸಗಿ ಟಿವಿ ಕಾರ್ಯಕ್ರಮ 'ಕಾಫಿ ವಿತ್ ಕರಣ್' ನಿರೂಪಕ ಕರಣ್ ಜೋಹರ್ ಅವರು, ಕ್ರಿಕೆಟಿಗರು ಅಮಾನತುಗೊಂಡ ನಂತರ ನನಗೆ ಹಲವು ರಾತ್ರಿ ನಿದ್ದೆಯೇ ಬಂದಿಲ್ಲ ಎಂದು ಹೇಳಿದ್ದಾರೆ.
ಈ ದುರದೃಷ್ಟಕರ ಘಟನಗೆ ನಾನೂ ಜವಾಬ್ದಾರನಾಗಿರುತ್ತೇನೆ ಎಂದು ಹೇಳಬಯಸುತ್ತೇನೆ. ಯಾಕೆಂದರೆ ಇದು ನನ್ನ ಶೋ, ಇದು ನನ್ನ ಫ್ಲ್ಯಾಟ್‌ಫಾರ್ಮ್. ಅವರನ್ನು ನಾನು ಅತಿಥಿಗಳಾಗಿ ಆಹ್ವಾನಿಸಿದ್ದೆ. ಹಾಗಾಗಿ ಕಾರ್ಯಕ್ರಮದ ಆಯೋಜನೆಯ ಸಂಪೂರ್ಣ ಜವಾಬ್ದಾರಿ ನನ್ನದಾಗಿದೆ ಎಂದು ಕರಣ್ ಜೋಹರ್ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಎಲ್ಲ ಘಟನೆಗಳ ಬಳಿಕ ನಾನು ಹಲವು ರಾತ್ರಿ ನಿದ್ದೆಯೇ ಬರಲಿಲ್ಲ. ಈ ಕ್ರಿಕೆಟಿಗರಿಗೆ ಅಂಟಿದ ಈ ಕಳಂಕವನ್ನು ಹೇಗೆ ಮರೆಮಾಚಬಹುದು ಎಂಬುದರ ಚಿಂತೆ ನನ್ನನ್ನು ಕಾಡುತ್ತಿತ್ತು. ನನ್ನ ಮಾತನ್ನು ಯಾರು ಆಲಿಸುತ್ತಾರೆ? ಇವೆಲ್ಲವೂ ನನ್ನ ನಿಯಂತ್ರಣದಲ್ಲಿರಲಿಲ್ಲ ಎಂದಿದ್ದಾರೆ.
ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಬಯಸುತ್ತಿಲ್ಲ. ಈ ಇಬ್ಬರು ಕ್ರಿಕೆಟಿಗರಿಗೆ ಕೇಳಿದ ಪ್ರಶ್ನೆಯನ್ನು ನಾನು ದೀಪಿಕಾ ಪಡುಕೋಣೆ ಹಾಗೂ ಅಲಿಯಾ ಭಟ್ ಅವರಲ್ಲೂ ಕೇಳಿದ್ದೆ. ಹಾಗೆಯೇ ಪ್ರಶ್ನೆಯನ್ನು ಕೇಳಿದ್ದೇನೆ. ಆದರೆ ನನಗೆ ಬಂದ ಉತ್ತರಗಳನ್ನು ನನ್ನಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂದರು. 
ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ನಿಷೇಧಕ್ಕೊಳಗಾಗಿ ವಿಚಾರಣೆಯನ್ನು ಎದುರಿಸುತ್ತಿರುವುದರ ಬಗ್ಗೆ ಕೇಳಿದಾಗ, ಹಾರ್ದಿಕ್-ರಾಹುಲ್ ಬಗ್ಗೆ ನನಗೆ ವಿಷಾದವಿದೆ. ನಾನು ಟಿಆರ್‌ಪಿಗಾಗಿ ಇದನ್ನೆಲ್ಲ ಮಾಡಿಲ್ಲ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಇದು ನನ್ನ ಕಾರ್ಯಕ್ರಮ ಆಗಿರುವುದರಿಂದ ಕೆಲವೊಂದು ಹೇಳಿಕೆಗಳು ಎಲ್ಲೇ ಮೀರಿರುವುದರಿಂದ ನಾನು ಕ್ಷಮೆಯಾಚಿಸುತ್ತೇನೆ. ನನಗನಿಸುತ್ತದೆ ತಮ್ಮ ತಪ್ಪಿಗಾಗಿ ಹಾರ್ದಿಕ್ ಹಾಗೂ ರಾಹುಲ್ ಈಗಾಗಲೇ ಬೆಲೆ ತೆತ್ತಿದ್ದಾರೆ ಎಂದರು. 
SCROLL FOR NEXT